ADVERTISEMENT

ಹತಾಶೆಯಿಂದ ಇವಿಎಂ ಮೇಲೆ ಗೂಬೆ ಕೂರಿಸುತ್ತಿವೆ

ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವುದೇ ಬಿಜೆಪಿ ಗುರಿ– ಸಚಿವ ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:36 IST
Last Updated 22 ಮೇ 2017, 6:36 IST
ಸಂವಾದದಲ್ಲಿ ವೆಂಕಯ್ಯ ನಾಯ್ಡು ಮಾತನಾಡಿದರು. ಡಾ.ಬಿ.ಎಚ್‌.ಮಂಜುನಾಥ್‌, ಎಲ್‌.ನಾಗೇಂದ್ರ, ಪ್ರತಾಪಸಿಂಹ, ಸುರೇಶ್‌ ಬಾಬು, ತೋಂಟದಾರ್ಯ, ನಂದೀಶ್‌ ಪ್ರೀತಂ, ಪ್ರಭಾಕರ್‌ ಸಿಂಧ್ಯ, ಎಚ್‌.ವಿ.ರಾಜೀವ್‌ ಇದ್ದಾರೆ
ಸಂವಾದದಲ್ಲಿ ವೆಂಕಯ್ಯ ನಾಯ್ಡು ಮಾತನಾಡಿದರು. ಡಾ.ಬಿ.ಎಚ್‌.ಮಂಜುನಾಥ್‌, ಎಲ್‌.ನಾಗೇಂದ್ರ, ಪ್ರತಾಪಸಿಂಹ, ಸುರೇಶ್‌ ಬಾಬು, ತೋಂಟದಾರ್ಯ, ನಂದೀಶ್‌ ಪ್ರೀತಂ, ಪ್ರಭಾಕರ್‌ ಸಿಂಧ್ಯ, ಎಚ್‌.ವಿ.ರಾಜೀವ್‌ ಇದ್ದಾರೆ   

ಮೈಸೂರು: ‘ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳು ನಿರಾಶಾದಾಯಕ ಸ್ಥಿತಿಗೆ ತಲುಪಿವೆ. ಚುನಾವಣೆಯಲ್ಲಿ ಗೆಲ್ಲುವ ತಾಕತ್ತು ಇಲ್ಲದೆ ಹತಾಶೆಯಿಂದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲೆ ಗೂಬೆ ಕೂರಿಸುತ್ತಿವೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇಲ್ಲಿ ಭಾನುವಾರ ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡಿ, ‘ಇವಿಎಂ ಎಂಬುದಕ್ಕೆ ಎವೆರಿ ಒನ್‌ ವೋಟ್‌ ಫಾರ್‌ ಮೋದಿ’ ಎಂಬ ವ್ಯಾಖ್ಯಾನವಿದೆ. ಗೆದ್ದಾಗ ಎಲ್ಲವೂ ಸರಿ ಇದೆ ಎನ್ನುವ ವಿಪಕ್ಷದವರು ಸೋತರೆ ಇವಿಎಂ ದೋಷದಿಂದ ಕೂಡಿದೆ ಎಂಬ ಆರೋಪ ಮಾಡುತ್ತಾರೆ. ಕುಣಿಯಲಾರದ ವ್ಯಕ್ತಿ ನೆಲ ಡೊಂಕು ಎನ್ನುವ ಪರಿಸ್ಥಿತಿ ಇವರದ್ದು’ ಎಂದು ವ್ಯಂಗ್ಯವಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರ್ಕಾರದ ಮೂರು ವರ್ಷಗಳ ಆಡಳಿತದ ದೊಡ್ಡ ಸಾಧನೆ ಎಂದರೆ ಯಾವುದೇ ಹಗರಣಗಳು ಇಲ್ಲದಿರುವುದು.  ಆದರೆ, ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮರೆತು ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹಗರಣಗಳಲ್ಲೇ ಕಾಲ ಕಳೆಯಿತು. ಭೂಮಿ, ಪಾತಾಳ, ಆಕಾಶ, ಅಂತರಿಕ್ಷವನ್ನೂ ಬಿಡದೆ ಭ್ರಷ್ಟಾಚಾರ ನಡೆಸಿದರು’ ಎಂದು ಆರೋಪಿಸಿದರು.

‘ಅಂಬಾನಿ, ಅದಾನಿ ಅವರು ನಿನ್ನೆ ಮೊನ್ನೆ ಶ್ರೀಮಂತರಾಗಿಲ್ಲ. ಕಾಂಗ್ರೆಸ್‌ ಸರ್ಕಾರದ ವೇಳೆಯೂ ಅವರು ಶ್ರೀಮಂತರಾಗಿಯೇ ಇದ್ದರು. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಬಳಿಕ 91 ಲಕ್ಷ ಜನ ಹೊಸದಾಗಿ ತೆರಿಗೆ ಪಾವತಿಸುವವರ ಪಟ್ಟಿಗೆ ಸೇರಿದ್ದಾರೆ. ದೇಶದ ಹಣ ವಿದೇಶಕ್ಕೆ ರವಾನೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಾಂಗ್ರೆಸ್‌ ಈಗ ಶೋಚನೀಯ ಪರಿಸ್ಥಿತಿ ತಲುಪಿದೆ. ಅದೊಂದು ಮುಳುಗುವ ಹಡಗು. ಸಮರ್ಥ ನಾಯಕರಿಲ್ಲದೆ ಆ ಪಕ್ಷದ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಈ ಕುರಿತು ಆ ಪಕ್ಷದ ವರಿಷ್ಠರು ಅವಲೋಕನ ನಡೆಸಬೇಕು’ ಎಂದು ಕುಟುಕಿದರು.

ಮೋದಿ ಒಂದೆರಡು ದಿನ ಸೂಟು ಧರಿಸಿದ್ದಕ್ಕೆ ಇದು ಸೂಟುಬೂಟಿನ ಸರ್ಕಾರ ಎಂದು ಹೇಳಿಕೊಂಡು ರಾಹುಲ್‌ ಗಾಂಧಿ ತಿರುಗಾಡುತ್ತಿದ್ದಾರೆ. ಅವರ ತಂದೆ (ರಾಜೀವ್‌ ಗಾಂಧಿ), ಮುತ್ತಾತ (ಜವಾಹರಲಾಲ್‌ ನೆಹರೂ) ಧರಿಸಿದ್ದೇನು ಎಂದು ಅವರು ಪ್ರಶ್ನಿಸಿದರು.

ಕೇರಳದಲ್ಲಿ ಮುಂದಿನ ಬಾರಿ ಬಿಜೆಪಿ ಸರ್ಕಾರ ಬರುವುದು ನಿಚ್ಚಳ. ಕೇರಳ ಮಾತ್ರವಲ್ಲ; ಇಡೀ ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವುದು ನಮ್ಮ ಗುರಿ. ಇದಕ್ಕಾಗಿ ಪಕ್ಷದ ಅಧ್ಯಕ್ಷ ಅಮಿತ್‌ ಷಾ ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಜನ್ಮ ತಾಳಿರುವುದು ‘ಮಿಷನ್‌’ಗಾಗಿಯೇ ಹೊರತು ‘ಕಮಿಷನ್‌’ಗಾಗಿ ಅಲ್ಲ. ‘ಮಿಷನ್‌ ಮೋದಿ’ (ಮೇಕಿಂಗ್‌ ಆಫ್‌ ಡೆವಲಪ್ಡ್‌ ಇಂಡಿಯಾ) ನಮ್ಮ ಗುರಿ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಇಡೀ ದೇಶದ ಜನರ ಮನೆ, ಮನ ಹಾಗೂ ಹೃದಯ ತಲುಪಿದ್ದಾರೆ. ಈಗ ಪಕ್ಷವನ್ನು ಜನರ ಬಳಿ ತೆಗೆದುಕೊಂಡು ಹೋಗುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ನೀಡಿದರು.

‘ಬಿಜೆಪಿ ಮೂಲಭೂತವಾದಿಗಳ ವಿರೋಧಿಯೇ ಹೊರತು ಮುಸ್ಲಿಂ, ಕ್ರಿಶ್ಚಿಯನ್ನರ ವಿರೋಧಿ ಅಲ್ಲ. ಕಾಂಗ್ರೆಸ್‌ 50–60 ವರ್ಷಗಳಿಂದ ಮುಸ್ಲಿಮರನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ಬಂದಿದೆ’ ಎಂದು ದೂರಿದರು.

ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುವ ಸುದ್ದಿ ವಾಹಿನಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷ ಕಟ್ಟಿ. ವಾಸ್ತವಾಂಶ, ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸಿ ಎಂದು ಸಲಹೆ ನೀಡಿದರು.

ಸಂವಾದದಲ್ಲಿ ಸಂಸದ ಪ್ರತಾಪಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ವಿಭಾಗ ಪ್ರಭಾರಿ ಎಲ್‌.ನಾಗೇಂದ್ರ, ಮುಖಂಡರಾದ ಎಸ್‌.ಎ.ರಾಮದಾಸ್‌, ಎಂ.ರಾಜೇಂದ್ರ, ಎಚ್‌.ವಿ.ರಾಜೀವ್‌, ತೋಂಟದಾರ್ಯ, ಸುರೇಂದ್ರ ಬಾಬು, ಪಾಲಿಕೆ ಸದಸ್ಯ ನಂದೀಶ್‌ ಪ್ರೀತಂ, ಉಪ ಮೇಯರ್‌ ರತ್ನಾ ಲಕ್ಷ್ಮಣ್‌, ಮಾಧ್ಯಮ ಪ್ರಮುಖ್‌ ಪ್ರಭಾಕರ್‌ ಸಿಂಧ್ಯ ಇದ್ದರು.

ಟಾಂಗಾದಲ್ಲಿ ಪ್ರಚಾರ ಮಾಡುತ್ತಿದ್ದೆ...
ಮೈಸೂರು:
ಯುವಕನಾಗಿದ್ದಾಗ ಟಾಂಗಾದಲ್ಲಿ ತೆರಳಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೆ. ಅಟಲ್‌ ಬಿಹಾರಿ ವಾಜಪೇಯಿ ಭೇಟಿ ನೀಡುವ ವಿಚಾರವನ್ನು ಮೈಕಿನಲ್ಲಿ ಹೇಳುತ್ತಾ ಊರೂರು ಸುತ್ತುತ್ತಿದ್ದೆ’ ಎಂದು ವೆಂಕಯ್ಯ ನಾಯ್ಡು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

‘ಅದೃಷ್ಟವೆಂದರೆ ವಾಜಪೇಯಿ ನೇತೃತ್ವದ ಸರ್ಕಾರದಲ್ಲೇ ಸಚಿವನಾದೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿದೆ. ಮೋದಿ ಸರ್ಕಾರದಲ್ಲೂ ಸಚಿವನಾಗಿ ಕೆಲಸ ಮಾಡಲು ಅವಕಾಶ ಲಭಿಸಿದೆ. ಚಹಾ ಮಾರುತ್ತಿದ್ದ ಮೋದಿ ವಿಶ್ವದ ಬಲಿಷ್ಠ ನಾಯಕರಾಗಿ ಬೆಳೆದಿದ್ದಾರೆ. ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದಲ್ಲಿ ಉನ್ನತ ಸ್ಥಾನ ಅಲಂಕರಿಸಬಹುದು ಎಂಬುದಕ್ಕೆ ಇವೆಲ್ಲಾ ಉದಾಹರಣೆ’ ಎಂದು ಪಕ್ಷದ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.