ADVERTISEMENT

‘ಹೆಚ್ಚು ತಂಬಾಕು ಉತ್ಪಾದನೆಗೆ ಅನುಮತಿ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:16 IST
Last Updated 17 ಏಪ್ರಿಲ್ 2017, 7:16 IST
ಹುಣಸೂರು: ತಾಲ್ಲೂಕಿನ ವಿವಿಧ ಭಾಗಗಳಿಗೆ ಶನಿವಾರ ಭೇಟಿ ನೀಡಿದ್ದ ತಂಬಾಕು ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ವರ್‌ ತಂಬಾಕು ಬೆಳೆಗಾರರ ಸಮಸ್ಯೆ ಆಲಿಸಿದರು.
 
ಇದೇ ಸಂದರ್ಭದಲ್ಲಿ ಚಿಲ್ಕುಂದ ಗ್ರಾಮದ ತಂಬಾಕು ಬೆಳೆಗಾರರು, ಪ್ರಸ್ತಕ ಸಾಲಿನಲ್ಲಿ 110ರಿಂದ 120 ಮಿಲಿಯನ್‌ ಕೆ.ಜಿ ತಂಬಾಕು ಉತ್ಪಾದಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
 
ತಾಲ್ಲೂಕಿನ ವಿವಿಧ ಭಾಗಗಳಿಗೆ ಶನಿವಾರ ಭೇಟಿ ನೀಡಿದ ತಂಬಾಕು ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ವರ್‌ ಅವರು  ಚಿಲ್ಕುಂದ ಗ್ರಾಮದಲ್ಲಿ ರೈತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ತಂಬಾಕು ಬೆಳೆ ಕುರಿತು ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ನಡೆಯಲಿರುವ ತಂಬಾಕು ಮಂಡಳಿ ಸಭೆಯಲ್ಲಿ ಸ್ಥಳಿಯ ರೈತರ ಅಭಿಪ್ರಾಯ ಸಂಗ್ರಹಿಸಿ ವಿಷಯ ಪ್ರಸ್ತಾಪಿಸುವ ಸಲುವಾಗಿ ಭೇಟಿ ನೀಡಿದ್ದಾಗಿ ತಿಳಿಸಿದರು.
 
ತಂಬಾಕು ಹಿತರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಚಂದ್ರೇಗೌಡ ಮಾತ ನಾಡಿ, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಸಿಂಗಲ್‌ ಬ್ಯಾರನ್ ಪರವಾನಗಿ ಹೊಂದಿರುವ ರೈತನಿಗೆ 1,650 ಕೆ.ಜಿ ತಂಬಾಕು ಉತ್ಪಾದಿಸಲು ಅನುಮತಿ ನೀಡಲಾಗಿದೆ.

ಈ ಬಾರಿ ರಾಜ್ಯಕ್ಕೆ ನಿಗದಿಗೊಳಿಸಿದ್ದ ಒಟ್ಟು ಉತ್ಪಾದನೆ ಕಡಿಮೆ ಇದೆ. ಮುಂದಿನ ಸಾಲಿಗೆ ಹೆಚ್ಚು ಉತ್ಪಾದಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
 
ಪಿರಿಯಾಪಟ್ಟಣ ತಾಲ್ಲೂಕಿನ ರೈತ ಮುಖಂಡ ವಿಕ್ರಂರಾಜೇ ಅರಸು ಮಾತನಾಡಿ, ಹಿಂದಿನ ಸಾಲಿನಲ್ಲಿ 95 ಮಿಲಿಯನ್‌ ಕೆ.ಜಿ ಉತ್ಪಾದಿಸಲು ಅನುಮತಿ ನೀಡಲಾಗಿತ್ತು. ಆದರೆ, ಸಕಾಲದಲ್ಲಿ ಮಳೆಯಾದ್ದರಿಂದ ರೈತರು ುುಣಮಟ್ಟದ ತಂಬಾಕು ಬೆಳೆದಿದ್ದಾರೆ ಎಂದು ಹೇಳಿದರು.
 
ತಂಬಾಕು ಮಂಡಳಿಯು ನಿಗದಿಗಿಂತ ಹೆಚ್ಚು ತಂಬಾಕು ಬೆಳೆದ ರೈತನಿಂದ ದಂಡ ವಸೂಲಿ ಮಾಡಿದೆ. ಈ ರೀತಿ ವಸೂಲಿಯಿಂದ ಕಳೆದ ಸಾಲಿನಲ್ಲಿ ₹ 25 ಕೋಟಿ ಹಣ ಸಂಗ್ರಹಿಸಿದೆ. ಇಂತಹ ನೀತಿ ಕೈ ಬಿಟ್ಟು ರೈತ ಪರವಾಗಿ ಮಂಡಳಿ ಕೆಲಸ ಮಾಡಬೇಕು ಎಂದು ನಿಲುವಾಗಿಲು ಗ್ರಾಮದ ಪ್ರಭಾಕರ್ ಒತ್ತಾಯಿಸಿದರು.
 
ಬೆಳೆಗಾರರ ಮನವಿಗೆ ಸ್ಪಂದಿಸಿದ ವೆಂಕಟೇಶ್ವರ್, ರಾಜ್ಯದ ತಂಬಾಕು ಬೆಳೆಗಾರರಿಂದ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ಬೆಂಗಳೂರಿನಲ್ಲಿ ಏ.17ರಂದು ನಡೆಯಲಿರುವ ಸಭೆಯಲ್ಲಿ ಈ ಮಾಹಿತಿ ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿ ಖರೀದಿದಾರರೊಂದಿಗೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
 
ತಂಬಾಕು ಮಂಡಳಿ ನಿರ್ದೇಶಕರಾದ ಕಿರಣ್ ಕುಮಾರ್‌, ಚೌಧರಿ, ಅಧಿಕಾರಿ ಶಿವರುದ್ರಯ್ಯ, ರೈತ ಮುಂಖಡ ಶಿವಣ್ಣ, ವಿಶ್ವನಾಥ್‌, ಮೂರ್ತಿ, ಮುತ್ತುರಾಜ್‌, ತಂಬಾಕು ಬೆಳೆಗಾರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.