ADVERTISEMENT

ಹೊಸ ಜನಸ್ನೇಹಿ ಗಸ್ತು ವ್ಯವಸ್ಥೆ ಜಾರಿ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:40 IST
Last Updated 17 ಮೇ 2017, 5:40 IST

ಮೈಸೂರು: ನಗರದಲ್ಲಿ 900ರಿಂದ 950 ಜನಸಂಖ್ಯೆಗೆ ಒಬ್ಬ ಕಾನ್‌ಸ್ಟೆಬಲ್‌ನನ್ನು ಉಸ್ತುವಾರಿಯಾಗಿ ನೇಮಿಸುವ ಮೂಲಕ ಜನಸ್ನೇಹಿ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಎಸ್.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದರು.

ಬೀಟ್‌ಗಳ ವಿಭಾಗೀಕರಣ, ಅವುಗಳ ಉಸ್ತುವಾರಿ ಸಿಬ್ಬಂದಿ ವಿವರಗಳನ್ನು ಪೊಲೀಸ್ ಠಾಣೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಜತೆಗೆ, ನಗರ ಪೊಲೀಸ್ ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದಾಖಲಾತಿ ಪರಿಶೀಲನೆಯಿಂದ ಹಿಡಿದು ಎಲ್ಲ ರೀತಿಯ ಪೊಲೀಸ್ ಸೇವೆಗಳನ್ನು ಕಾನ್‌ಸ್ಟೆಬಲ್‌ಗಳು ಒದಗಿಸುತ್ತಾರೆ. ಜನರು ತಮ್ಮ ತೊಂದರೆಯನ್ನು ಹೇಳಿಕೊಳ್ಳಲು ಇನ್ನು ಮುಂದೆ, ಎಎಸ್‌ಐ ಅಥವಾ ಇನ್‌ಸ್ಪೆಕ್ಟರ್‌ಗಳನ್ನು ಕಾಯಬೇಕಾಗಿಲ್ಲ. ತಮ್ಮ ವ್ಯಾಪ್ತಿಯ ಕಾನ್‌ಸ್ಟೆಬಲ್‌ಗೆ ದೂರು ನೀಡಬಹುದು ಎಂದು ಹೇಳಿದರು.

ADVERTISEMENT

ಏನಿದು ಹೊಸ ಗಸ್ತು ವ್ಯವಸ್ಥೆ: ನಗರಕ್ಕೆ ಮಂಜೂರಾಗಿರುವ ಕಾನ್‌ಸ್ಟೆಬಲ್‌ಗಳ ಸಂಖ್ಯೆ ಆಧಾರಿಸಿ ಇಡೀ ನಗರವನ್ನು 1,313 ಬೀಟ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಬೀಟ್‌ಗೂ ಒಬ್ಬೊಬ್ಬ ಕಾನ್‌ಸ್ಟೆಬಲ್‌ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬೀಟ್‌ ಸಿಬ್ಬಂದಿ ತಮ್ಮ ವ್ಯಾಪ್ತಿಯ ಪ್ರತಿ ಮನೆಗೂ ಭೇಟಿ ನೀಡಿ ದೂರವಾಣಿ ಸಂಖ್ಯೆ ನೀಡುವ ಮೂಲಕ ನಿರಂತರ ಸಂಪರ್ಕದಲ್ಲಿರಬೇಕು.

ತಮ್ಮ ವ್ಯಾಪ್ತಿಯ ಬೀಟ್‌ನಲ್ಲಿ ಕಾನ್‌ಸ್ಟೆಬಲ್‌ಗಳು ನಾಗರಿಕರಿಂದ ಕೂಡಿದ ಒಂದು ಸಮಿತಿ ರಚಿಸಿ, ಪ್ರತಿ ತಿಂಗಳು ಸಭೆ ನಡೆಸಬೇಕು. ತಮ್ಮ ವ್ಯಾಪ್ತಿಯಲ್ಲಿ ವಾಸವಿರುವ ಗಣ್ಯ ವ್ಯಕ್ತಿಗಳು, ವಿವಿಧ ಧರ್ಮ, ಜಾತಿಯ ಮುಖಂಡರು, ಬಂದೂಕು ಪರವಾನಗಿ ಹೊಂದಿರುವವರು, ಬಾರ್‌ಗಳು, ಪ್ರಮುಖ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಪ್ರೇಕ್ಷಣೀಯ, ಧಾರ್ಮಿಕ ಸ್ಥಳಗಳು ಸೇರಿದಂತೆ ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ರೌಡಿಶೀಟರ್‌ಗಳ ಚಟುವಟಿಕೆ ಮೇಲೆ ನಿರಂತರ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ.

ಕಾನ್‌ಸ್ಟೆಬಲ್‌ಗಳೇ ಹೊಣೆ: ಬೀಟ್‌ ವ್ಯವಸ್ಥೆಯಲ್ಲಿ ರೌಡಿ ಚಟುವಟಿಕೆಗಳು, ಕಳ್ಳತನಗಳು ಹಾಗೂ ಇತರೆ ಸಮಾಜವಿರೋಧಿ ಕೃತ್ಯಗಳು ಹೆಚ್ಚಾದರೆ, ಅದಕ್ಕೆ ಆಯಾ ಬೀಟ್‌ನ ಉಸ್ತುವಾರಿ ಹೊತ್ತಿರುವ ಕಾನ್‌ಸ್ಟೆಬಲ್‌ಗಳೇ ಹೊಣೆಗಾರರಾಗಿರುತ್ತಾರೆ. ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಂಜೂರಾಗಿರುವ ಕಾನ್‌ಸ್ಟೆಬಲ್‌ಗಳ ಹುದ್ದೆಗಳಲ್ಲಿ ಸುಮಾರು 400 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ 400ಕ್ಕೂ ಹೆಚ್ಚಿನ ಕಾನ್‌ಸ್ಟೆಬಲ್‌ಗಳಿಗೆ ಹೆಚ್ಚುವರಿ ಬೀಟ್‌ಗಳ ಜವಾಬ್ದಾರಿ ಇರಲಿದೆ. ಬೀಟ್‌ ವ್ಯವಸ್ಥೆಯಿಂದ ಕಾನ್‌ಸ್ಟೆಬಲ್‌ಗಳ ಇತರ ಕೆಲಸಗಳು ಹಾಗೆಯೇ ಇರುತ್ತವೆ ಎಂದು ಹೇಳಿದರು.

**

ಚಾಮುಂಡಿಬೆಟ್ಟಕ್ಕೆ ರಕ್ಷಣಾ ದ್ವಾರ
ಚಾಮುಂಡಿಬೆಟ್ಟದಲ್ಲಿ ಅನೈತಿಕ ಚಟುವಟಿಕೆ ತಡೆಯಲು ನಾಲ್ಕು ದಿಕ್ಕಿನಲ್ಲೂ ರಕ್ಷಣಾ ದ್ವಾರಗಳನ್ನು ನಿರ್ಮಿಸಲು ಹಾಗೂ ಈಗಾಗಲೇ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಬದಲಿಸಿ, ಅವುಗಳ ಸಂಖ್ಯೆ ಹೆಚ್ಚಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು  ಸುಬ್ರಹ್ಮಣ್ಯೇಶ್ವರರಾವ್ ಮಾಹಿತಿ ನೀಡಿದರು.

ನಗರದಲ್ಲಿ ಯಾವುದೇ ಕಂಪ್ಯೂಟರ್ ಹ್ಯಾಕ್‌ ಆಗಿಲ್ಲ. ಆದರೆ, ಅಪರಿಚಿತ ಇ–ಮೇಲ್‌ಗಳನ್ನು ತೆರೆಯುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.