ADVERTISEMENT

10 ಮಂದಿ ಗಡಿಪಾರು, ರೌಡಿಪಟ್ಟಿಗೆ ಸಾವಿರ

ಜಿಲ್ಲೆಯಲ್ಲಿ ಮರಳು ಮಾಫಿಯಾಕ್ಕೆ ಕಡಿವಾಣ; ಪೊಲೀಸರ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:53 IST
Last Updated 16 ಫೆಬ್ರುವರಿ 2017, 9:53 IST
10 ಮಂದಿ ಗಡಿಪಾರು, ರೌಡಿಪಟ್ಟಿಗೆ ಸಾವಿರ
10 ಮಂದಿ ಗಡಿಪಾರು, ರೌಡಿಪಟ್ಟಿಗೆ ಸಾವಿರ   
ಮೈಸೂರು: ಅವ್ಯಾಹತವಾಗಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸರು, 10 ಮಂದಿ ರೂಢಿಗತ ಆರೋಪಿಗಳನ್ನು ಜಿಲ್ಲೆಯಿಂದ ಒಂದು ವರ್ಷದವರೆಗೆ ಗಡಿಪಾರು ಮಾಡುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.
 
ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿರ್ಬಂಧಿಸಿದ ಬಳಿಕವೂ ಅಕ್ರಮ ಸಾಗಣೆ ನಿಲ್ಲದ ಪರಿಣಾಮ ಕಠಿಣ ಕ್ರಮಕ್ಕೆ ಪೊಲೀಸರು ನಿರ್ಧರಿಸಿದ್ದಾರೆ. 5 ಆರೋಪಿಗಳನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲು ಹಾಗೂ ಒಂದು ಸಾವಿರಕ್ಕೂ ಅಧಿಕ ಮಂದಿಯ ವಿರುದ್ಧ ರೌಡಿಪಟ್ಟಿ ತೆರೆಯಲು ತಯಾರಿ ನಡೆಸಿದ್ದಾರೆ.
 
ಕಾವೇರಿ, ಕಪಿಲಾ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲಿ ಮರಳು ಗಣಿಗಾರಿಕೆ ಅಪಾಯದ ಮಟ್ಟ ಮೀರಿದ ಪರಿಣಾಮ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಎರಡು ವರ್ಷಗಳಿಂದ ಇದಕ್ಕೆ ನಿರ್ಬಂಧ ಹೇರಿದೆ. ಆದರೂ, ಮರಳು ಅಕ್ರಮ ಸಾಗಣೆ ನಿಯಂತ್ರಣಕ್ಕೆ ಬಂದಿಲ್ಲ ಎಂಬುದಕ್ಕೆ 2016ರಲ್ಲಿ ದಾಖಲಾದ ಪ್ರಕರಣಗಳೇ ನಿದರ್ಶನ. ಈ ಪೈಕಿ ಬಹುತೇಕ ಪ್ರಕರಣಗಳು ಆಗಸ್ಟ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಬೆಳಕಿಗೆ ಬಂದಿವೆ.
 
ತಿ.ನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿಹೆಚ್ಚು ಮರಳು ಅಕ್ರಮ ಗಣಿಗಾರಿಕೆ ಪ್ರಕರಣಗಳು ದಾಖಲಾಗಿವೆ. ಅಕ್ರಮ ಸಾಗಣೆಯಲ್ಲಿ ತೊಡಗಿದ ಲಾರಿಗಳು ನಿತ್ಯವೂ ಪತ್ತೆಯಾಗುತ್ತಿವೆ. ಎತ್ತಿನಗಾಡಿಯ ಮೂಲಕ ಮರಳನ್ನು ನದಿಯಿಂದ ಹೊರತಂದು ಬಳಿಕ ಲಾರಿಯಲ್ಲಿ ಸಾಗಣೆ ಮಾಡುವ ದಂಧೆಯೂ ನಿರಾತಂಕವಾಗಿ ನಡೆಯುತ್ತಿದೆ. ಮರಳನ್ನು ಹೊರರಾಜ್ಯಕ್ಕೆ ಸಾಗಣೆ ಮಾಡುವುದನ್ನು ಸರ್ಕಾರ ನಿಷೇಧಿಸಿದರೂ, ಕೇರಳದ ಪರವಾನಗಿ ಹೊಂದಿದ ಮರಳು ಲಾರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
 
ಮರಳು ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆಯಲ್ಲಿ ತೊಡಗಿದ ಆರೋಪಿಗಳ ವಿರುದ್ಧ ರೌಡಿಪಟ್ಟಿ ತೆರೆಯುವಂತೆ ಸರ್ಕಾರ ಕೆಲ ವರ್ಷಗಳ ಹಿಂದೆಯೇ ನಿರ್ದೇಶನ ನೀಡಿದೆ. ಆದರೂ, ಈವರೆಗೆ ಇಂತಹ ಆರೋಪಿಗಳು ಜಿಲ್ಲೆಯ ಯಾವ ಠಾಣೆಯಲ್ಲಿಯೂ ರೌಡಿಶೀಟರ್‌­ಗಳಾಗಿರಲಿಲ್ಲ.
 
ಯಾರ ವಿರುದ್ಧ  ಕ್ರಮ..?
ಮೈಸೂರು: ಮರಳು ಅಕ್ರಮ ಸಾಗಣೆ ಅಥವಾ ಗಣಿಗಾರಿಕೆಯಲ್ಲಿ ಸಿಕ್ಕಿಬಿದ್ದ ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 379 (ಸಂಪತ್ತು ಕಳವು) ಹಾಗೂ ಮೋಸದ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಅಡಿ ಐಪಿಸಿ 420 (ವಂಚನೆ) ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
 
ಮರಳು ಲಾರಿ ತಡೆದ ಪೊಲೀಸರಿಗೆ ಸಹಕರಿಸದವರ ವಿರುದ್ಧ ಐಪಿಸಿ 353ರ (ಸರ್ಕಾರಿ ಕೆಲಸಕ್ಕೆ ಅಡ್ಡಿ)ಅಡಿ ಕೂಡ ಪ್ರಕರಣ ದಾಖಲಿ
ಸಿದ್ದಾರೆ. ಈ ಮೂರು ಆರೋಪಕ್ಕೆ ಗುರಿಯಾಗಿರುವ ಹಾಗೂ  5ಕ್ಕಿಂತ ಹೆಚ್ಚು ಪ್ರಕರಣ ಎದುರಿಸುತ್ತಿರುವ ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ.
 
ಮರಳು ಮಾಫಿಯಾ ಒಂದು ಸಂಘಟಿತ ಅಪರಾಧ. ಗಡಿಪಾರಿಗೆ ಶಿಫಾರಸು ಮಾಡಿದ ಆರೋಪಿಗಳ ಪಟ್ಟಿಗೆ ಜಿಲ್ಲಾಧಿಕಾರಿ ಸಹಿ ಹಾಕುವುದು ಮಾತ್ರ ಬಾಕಿ ಇದೆ
ರವಿ ಡಿ.ಚನ್ನಣ್ಣನವರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.