ADVERTISEMENT

17ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೆ.ಆರ್‌.ನಗರದಲ್ಲಿ ಸಮ್ಮೇಳನಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 11:25 IST
Last Updated 15 ಫೆಬ್ರುವರಿ 2017, 11:25 IST

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಫೆ. 17ರಿಂದ 19ರ ವರೆಗೆ ಮೂರು ದಿನಗಳ ಕಾಲ ಕೆ.ಆರ್‌.ನಗರದಲ್ಲಿ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಇಲ್ಲಿ ಮಂಗಳವಾರ ತಿಳಿಸಿದರು

ಕೆ.ಆರ್‌.ನಗರದ ರಾಜ್‌ಕುಮಾರ್‌ ಬಾನಂಗಳ ಬಯಲು ರಂಗಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. 17ರಂದು ಬೆಳಿಗ್ಗೆ 8 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಸಾ.ರಾ.ಮಹೇಶ್‌ ಧ್ವಜಾ­ರೋಹಣ ನೆರವೇರಿಸುವರು. 9 ಗಂಟೆಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. 10 ಗಂಟೆಗೆ ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಸಮ್ಮೇಳನ ಉದ್ಘಾಟಿಸುವರು.

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಪ್ರೊ.ಕೆ.­ಅನಂತ­ರಾಮು ಸರ್ವಾಧ್ಯಕ್ಷರಾಗಿ ಸಮ್ಮೇಳನ ಮುನ್ನಡೆಸುವರು ಎಂದು ಪತ್ರಿಕಾ­ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸದ ಸಿ.ಎಸ್‌.ಪುಟ್ಟರಾಜು ಅವರು ‘ಜನಪ್ರಿಯ ರಾಮಾಯಣ’ ಪುಸ್ತಕ ಬಿಡುಗಡೆಗೊಳಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ಅವರು ಚಿತ್ರಕಲಾ ಪ್ರದರ್ಶನ ಹಾಗೂ ಕಾಂಗ್ರೆಸ್‌ ಮುಖಂಡ ಅಡಗೂರು ಎಚ್‌.ವಿಶ್ವನಾಥ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು ಎಂದು ಹೇಳಿದರು.

‘ವರ್ತಮಾನದ ಕನ್ನಡದ ಆತಂಕಗಳು’, ‘ನಾಡಿನ ರೈತರಿಗೆ ಸಮಸ್ಯೆಯಾಗಿರುವ ಬರ’, ‘ಕೃಷಿ ನಿರ್ವಹಣೆ’ ಕುರಿತು ಗೋಷ್ಠಿಗಳು ಜರುಗಲಿವೆ. ಪ್ರಗತಿಪರ ರೈತ ಪುಟ್ಟಯ್ಯ ಅಧ್ಯಕ್ಷತೆ ವಹಿಸುವರು. ಎರಡು ಕವಿಗೋಷ್ಠಿಗಳು, ಐದು ವಿಚಾರಗೋಷ್ಠಿಗಳು ನಡೆಯಲಿವೆ.

ಜಿಲ್ಲೆಯ ಜಾನಪದ, ರಂಗಭೂಮಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಕೊಡುಗೆ, ದಲಿತ ಮತ್ತು ಮಹಿಳಾ ಸಾಹಿತ್ಯ ಚಿಂತನೆಗಳ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ. 19ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ರಾಜಶೇಖರ ಕದಂಬ, ಗೌರವ ಕಾರ್ಯದರ್ಶಿ ಕೆ.ಎಸ್‌.ನಾಗರಾಜು, ಜಿಲ್ಲಾ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.