ADVERTISEMENT

ಸಂಕ್ರಾಂತಿ ನಂತರ ಕಾಂಗ್ರೆಸ್‌ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 5:17 IST
Last Updated 6 ಜನವರಿ 2018, 5:17 IST
ಸಿ.ಎಚ್‌.ವಿಜಯಶಂಕರ್‌
ಸಿ.ಎಚ್‌.ವಿಜಯಶಂಕರ್‌   

ಮೈಸೂರು: ಸಂಕ್ರಾಂತಿಯ ನಂತರ ಕಾಂಗ್ರೆಸ್‌ ಪಕ್ಷ ಸೇರುವುದಾಗಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಇಲ್ಲಿ ತಿಳಿಸಿದರು. ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಪಕ್ಷ ಸೇರಲು ಸರಿಯಾದ ಕಾಲ ಕೂಡಿಬಂದಿಲ್ಲ. ಒಳ್ಳೆಯ ದಿನಕ್ಕಾಗಿ ಕಾಯುತ್ತಿದ್ದೇನೆ. ನಾನು ಮೂಲ ಕಾಂಗ್ರೆಸಿಗನಾಗಿದ್ದು, ನನ್ನ ಸ್ವಾಭಿಮಾನ, ಆತ್ಮವಿಶ್ವಾಸಕ್ಕೆ ಧಕ್ಕೆ ಬಂದ ಕಾರಣ ಬಿಜೆಪಿಯಿಂದ ಹೊರಬಂದೆ’ ಎಂದು ಅವರು ಹೇಳಿದರು.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಸೇರಿದಂತೆ ಕಾಂಗ್ರೆಸ್ಸಿನ ಹಿರಿಯ ಮುಖಂಡರು ನನ್ನೊಡನೆ ಚರ್ಚಿಸಿದ್ದಾರೆ. 1980ರಲ್ಲಿ ಕಾಂಗ್ರೆಸ್‌ನಲ್ಲಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದೆ. ಕೆಲ ಭಿನ್ನಾಭಿಪ್ರಾಯದಿಂದ ಪಕ್ಷ ಬಿಟ್ಟು ಹೊರಬಂದಿದ್ದೆ. ಈಗ ಮತ್ತೆ ಕುಟುಂಬ ಸೇರುವ ಸಂದರ್ಭ ಬಂದಿದೆ’ ಎಂದರು.

‘ಕಾಂಗ್ರೆಸ್‌ ಸೇರಿದರೆ ಟಿಕೆಟ್‌ ನೀಡುವಂತೆ ಕೇಳುವುದಿಲ್ಲ. ಏಕೆಂದರೆ, ನನಗಿಂತಲೂ ಹಿರಿಯರೂ ಅನುಭವಿಗಳೂ ಆದ ಮುಖಂಡರು ಪಕ್ಷದಲ್ಲಿದ್ದಾರೆ. ಒಂದು ವೇಳೆ ಟಿಕೆಟ್ ನೀಡಿದರೂ ಮುಂದೆ ಬರುವ ಸವಾಲುಗಳನ್ನು ಎದುರಿಸಲು ಬೌದ್ಧಿಕವಾಗಿ, ಮಾನಸಿಕವಾಗಿ ಸಿದ್ಧನಿದ್ದೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

’ಕೇಂದ್ರದ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಾಮಾಜಿಕ ಅಪರಾಧ. ಅದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ; ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆ ರೀತಿ ಮಾತನಾಡಬಾರದು’ ಎಂದರು.

ಸಹಜ ಸ್ಥಿತಿಯತ್ತ ಹುಣಸೂರು: ‘ಹುಣಸೂರು ಸೂಕ್ಷ್ಮಪ್ರದೇಶ ಎಂಬ ಸ್ಥಿತಿಗೆ ಬಂದಿರುವುದು ವಿಪರ್ಯಾಸದ ಸಂಗತಿ. ಹಿಂದಿನಿಂದಲೂ ಸಾಮರಸ್ಯದ ಜೀವನ ನಡೆಸಿಕೊಂಡು ಬಂದ ಜನರಿರುವ ತಾಲ್ಲೂಕು ಇದಾಗಿತ್ತು. ಕೆಲವರು ಭಾವನಾತ್ಮಕವಾಗಿ ಇಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಆದರೆ, ಇದು ತಾತ್ಕಾಲಿಕವಷ್ಟೇ. ಹುಣಸೂರು ಸಹಜ ಸ್ಥಿತಿಗೆ ಬರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.