ADVERTISEMENT

ರಾಸುಗಳ ಕಳೇಬರಗಳಿಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 5:45 IST
Last Updated 7 ಜನವರಿ 2018, 5:45 IST
ಚಂದಗಾಲು ಬಳಿ ಕಾವೇರಿ ನದಿಯಲ್ಲಿ ಎಸೆಯಲಾಗಿದ್ದ ಜಾನುವಾರು ಕಳೇಬರ ಹೂಳಲು ಗುಂಡಿ ತೋಡುತ್ತಿರುವ ಕಾರ್ಮಿಕ
ಚಂದಗಾಲು ಬಳಿ ಕಾವೇರಿ ನದಿಯಲ್ಲಿ ಎಸೆಯಲಾಗಿದ್ದ ಜಾನುವಾರು ಕಳೇಬರ ಹೂಳಲು ಗುಂಡಿ ತೋಡುತ್ತಿರುವ ಕಾರ್ಮಿಕ   

ಕೆ.ಆರ್.ನಗರ: ಕಾವೇರಿ ನದಿಗೆ ಗ್ರಾಮಗಳಲ್ಲಿ ವಿವಿಧ ಕಾರಣಗಳಿಂದಾಗಿ ಮೃತಪಡುವ ಜಾನುವಾರುಗಳ ಕಳೇಬರ ಹಾಗೂ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಮೋಹನ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಚಂದಗಾಲು ಗ್ರಾಮದ ಬಳಿಯ ಕಾವೇರಿ ನದಿಗೆ ಮೃತಪಟ್ಟ ಜಾನುವಾರುಗಳ ಕಳೇಬರ ಎಸೆದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದ ಇಒ ಲಕ್ಷ್ಮಿ ಮೋಹನ, ‘ಚಂದಗಾಲು ಬಳಿಯ ಕಾವೇರಿ ನದಿಯಲ್ಲಿ ಎಸೆಯಲಾದ ಜಾನುವಾರಗಳ ಕಳೇಬರ ಕೂಡಲೇ ತೆರವುಗೊಳಿಸಿ ಹೂಳುವಂತೆ ಚಂದಗಾಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಎರಡು ದಿನಗಳಿಂದ ಶೋಧ ಕಾರ್ಯ ನಡೆಸಿ ಗುಂಡಿಯಲ್ಲಿ ಹೂಳಿಸುವ ಕೆಲಸ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಕಾವೇರಿ ನದಿಗೆ ಜಾನುವಾರುಗಳ ಕಳೇಬರ ಎಸೆಯದಂತೆ ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುತ್ತದೆ. ಜತೆಗೆ, ಡಂಗೂರ ಹೊಡೆಸಲಾಗುತ್ತದೆ. ನದಿಗೆ ಜಾನುವಾರುಗಳ ಕಳೇಬರ, ತ್ಯಾಜ್ಯ ಎಸೆಯ ದಂತೆ ನೋಡಿ ಕೊಳ್ಳಲು ವಾಚ್ ಮೆನ್ ಕೂಡ ನೇಮಿಸಲಾಗು ವುದು’ ಎಂದು ತಿಳಿಸಿದರು.

ಕಾಲು–ಬಾಯಿ ಜ್ವರ ಇಲ್ಲ: ರಾಜ್ಯದ ಯಾವ ಭಾಗದಲ್ಲೂ ಜಾನುವಾರುಗಳಿಗೆ ಕಾಲು–ಬಾಯಿ ಜ್ವರ ಇಲ್ಲ ಎಂದು ತಾಲ್ಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರಿ) ಡಾ.ಜೆ.ಎಲ್.ಶ್ರೀನಿವಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ವರದಿಗೆ ಸ್ಪಂದಿಸಿ ಮಾತ ನಾಡಿದ ಅವರು, ‘ಚಂದಗಾಲು ಗ್ರಾಮದಲ್ಲಿ ಜಾನುವಾರುಗಳು ಕಾಲು ಬಾಯಿ ಜ್ವರದಿಂದ ಮೃತಪಟ್ಟಿಲ್ಲ. ಈ ರೋಗದಿಂದ ಮೃತಪಡುವುದೂ ಇಲ್ಲ. ಚಪ್ಪೆರೋಗದಿಂದ ಮೃತಪಡುವ ಸಾಧ್ಯತೆ ಹೆಚ್ಚು’ ಎಂದು ಮಾಹಿತಿ ನೀಡಿದರು.

‘ವಿವಿಧ ಕಾಯಿಲೆಗಳಿಂದ ಮೃತಪಡುವ ಜಾನುವಾರು ಕಳೇಬರ ನದಿಗೆ ಎಸೆಯಬಾರದು. ರಾಸುಗಳು ಮೃತಪಟ್ಟರೆ ಪರೀಕ್ಷೆಗೆ ಒಳಪಡಿಸಿ ಮರಣೋತ್ತರ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದರೆ ₹ 10 ಸಾವಿರ ಪಡೆಯ ಬಹುದು’ ಎಂದು ಹೇಳಿದರು.

‘ಕಾವೇರಿ ನದಿಯಲ್ಲಿ ಎಸೆಯಲಾಗಿದ್ದ ಜಾನುವಾರುಗಳ ಕಳೇಬರ ಸಂಗ್ರಹಿಸಿ ಮಣ್ಣಿನಲ್ಲಿ ಮುಚ್ಚುವ ಕೆಲಸ ಪಶು ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾಡಿದ್ದಾರೆ. ಕಳೇಬರಗಳು ಕೊಳೆತ್ತಿದ್ದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚಾಗಿತ್ತು. ಹೀಗಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡಿಸಲಾಗಿದೆ. ಪಶು ವೈದ್ಯ ಡಾ.ರಾಮು, ಪಶು ಚಿಕಿತ್ಸಕರಾದ ಅಪ್ಪಾಜಿ, ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈಗ ಆ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ತಿಳಿಸಿದರು.

* * 

ಚಂದಗಾಲು ಗ್ರಾಮದಲ್ಲಿ ರಾಸು ಮೃತಪಡುತ್ತಿರುವ ಬಗ್ಗೆ ಕಾರಣ ತಿಳಿದಿಲ್ಲ. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಮಾದರಿ ಕಳುಹಿಸಲಾಗಿದೆ
ಡಾ.ಜೆ.ಎಲ್.ಶ್ರೀನಿವಾಸ್, ತಾಲ್ಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.