ADVERTISEMENT

ಕಸದ ತೊಟ್ಟಿಯಲ್ಲಿ 12 ಮಾನವ ತಲೆಬುರುಡೆ ಪತ್ತೆ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 5:59 IST
Last Updated 20 ಜನವರಿ 2018, 5:59 IST

ಮೈಸೂರು: ವಿಜಯನಗರ 2ನೇ ಹಂತದ ಚಿಕ್ಕಮ್ಮ ಶಾಲೆಯ ಬಳಿ ಕಸದ ತೊಟ್ಟಿಯಲ್ಲಿ ಶುಕ್ರವಾರ 12 ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ಶಾಲಾ ಮಕ್ಕಳು ಇದನ್ನು ನೋಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ, ವಶಕ್ಕೆ ಪಡೆದಿದ್ದಾರೆ.

‘ಚೀಲದಲ್ಲಿ ತಲೆಬುರುಡೆಗಳನ್ನು ತುಂಬಿಕೊಂಡು ಬಂದು ಕಸದ ರಾಶಿಗೆ ಸುರಿದು ಹೋಗಿದ್ದಾರೆ. ಶ್ವಾನದಳ ಸ್ಥಳ ಪರೀಕ್ಷೆ ನಡೆಸಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ತಂದುಹಾಕಿರುವವರ ಬಗ್ಗೆ ಮಾಹಿತಿ ದೊರೆತಿಲ್ಲ’ ಎಂದು ವಿಜಯನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಅನಿಲ್‌ ತಿಳಿಸಿದರು. ‘ಬುರುಡೆಗಳು ತೀರಾ ಹಳೆಯ ಕಾಲದವು. ಮುಟ್ಟಿದರೆ ಉದುರಿಹೋಗುವಷ್ಟು ಶಿಥಿಲವಾಗಿವೆ’ ಎಂದು ವಿವರಿಸಿದರು.

ಕಾರಣ ಸ್ಪಷ್ಟವಿಲ್ಲ– ಡಿಸಿಪಿ: ‘ತಲೆಬುರುಡೆಗಳ ರಾಶಿ ಸುರಿದಿರುವುದರ ಹಿಂದಿನ ಕಾರಣ ತಿಳಿದಿಲ್ಲ. ಮಾಟ ಮಂತ್ರ ಮಾಡಿಸುವವರು ಸುರಿದಿರಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕಾಗಿ ಬುರುಡೆಗಳನ್ನು ಕೆಲವರು ನೀಡುತ್ತಾರೆ.

ADVERTISEMENT

ಅಧ್ಯಯನಕ್ಕೆ ಅರ್ಹವಲ್ಲದ ಬುರುಡೆಗಳನ್ನು ಇಲ್ಲಿ ಹಾಕಿರಬಹುದು. ಅಥವಾ ಮನೆಗಳನ್ನು ನಿರ್ಮಿಸುವಾಗ ಸಿಕ್ಕ ಬುರುಡೆಗಳು ಇರಬಹುದು’ ಎಂದು ಡಿಸಿಪಿ ವಿಷ್ಣುವರ್ಧನ ತಿಳಿಸಿದರು. ‘ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ಸಿಗಲಿದೆ. ಈಗ ಕೇವಲ ಪ್ರಾಥಮಿಕ ಮಾಹಿತಿಯಷ್ಟೇ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.