ADVERTISEMENT

ಅಂಕಲಿಮಠ ನೀರಾವರಿ ಯೋಜನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:00 IST
Last Updated 15 ಜುಲೈ 2017, 7:00 IST

ಲಿಂಗಸುಗೂರು: ‘ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಕೈಬಿಟ್ಟು ಹೋಗಿರುವ ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳ ರೈತರ ಬದುಕು ಹಸನಗೊಳಿಸಲು ಅಂಕಲಿಮಠ ಏತ ನೀರಾವರಿ ಯೋಜನೆ ಮಂಜೂರು ಮಾಡಬೇಕು’ ಎಂದು ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಮುಖಂಡರು ಒತ್ತಾಯಿಸಿದರು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ‘ಪೊಲ್ಲಾವರಂ ಯೋಜನೆಯಡಿ ಕೃಷ್ಣಾ ಕೊಳಕ್ಕೆ ಲಭಿಸಿದ 23 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡು ಸರ್ಕಾರದ ನಿರ್ಧಾರದಂತೆ ನಂದವಾಡಗಿ ಏತ ನೀರಾವರಿ ಯೋಜನೆಗೆ 6ಟಿಎಂಸಿ ನೀರು ಹಂಚಿಕೆ ಮಾಡಬೇಕು’ ಎಂದರು.

‘ಇದೆ ಭಾಗದಲ್ಲಿ ಕನಸಾವಿ ಗ್ರಾಮದ ಬಳಿ ಆರ್‌ಎಲ್‌ 610ರಲ್ಲಿ ಜಾಕ್‌ವೆಲ್‌ ನಿರ್ಮಿಸಿ ಕೈ ಬಿಟ್ಟಿರುವ ಮುದಗಲ್‌ ಭಾಗದ 30 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು. ಸಿದ್ಧರಾಮಣ್ಣ ಸಾಹುಕಾರ, ಎಚ್‌.ಬಿ. ಮುರಾರಿ, ಶರಣಗೌಡ ಬಸಾಪುರ, ರಮೇಶ ಶಾಸ್ತ್ರಿ ಇದ್ದರು.

ADVERTISEMENT

ಪಟ್ಟಾ ಆದೇಶ ನೀಡಿ: ಹಲವು ವರ್ಷಗಳಿಂದ ಅರಣ್ಯ, ಸರ್ಕಾರಿ ಭೂಮಿಗಳಲ್ಲಿ ಅಕ್ರಮ ಸಾಗುವಳಿ ಮಾಡುತ್ತ ಬಂದಿರುವ ಕುಟುಂಬಗಳಿಗೆ ಪಟ್ಟಾ ಆದೇಶ ನೀಡಬೇಕು. ವಸತಿ ಹೀನ ದಲಿತ ಕುಟುಂಬಗಳಿಗೆ ವಸತಿ ಯೋಜನೆಯಡಿ ಸೌಲಭ್ಯ ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿ (ಸಮತಾವಾದ) ಮುಖಂಡ ಬಸವರಾಜ ನಗನೂರು, ದೇವರಾಜ ಸಂತೆಕೆಲ್ಲೂರು ಆಗ್ರಹಪಡಿಸಿದರು.

ಸಮಗ್ರ ನೀರಾವರಿಗೆ ಆಗ್ರಹ: ನಾರಾಯಣಪುರ ಬಲದಂಡೆ ನಾಲೆ, ತುಂಗಭದ್ರಾ ಎಡದಂಡೆ ನಾಲೆಗಳ ನೀರಾವರಿ ಪ್ರದೇಶದಿಂದ ವಂಚಿತಗೊಂಡ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ನಾರಾಯಣಪುರ ಬಲದಂಡೆ ನಾಲೆ ಅಧುನಿಕರಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಸಿದ್ದಲಿಂಗೇಶ್ವರಗೌಡ ಪಾಟೀಲ, ಅಮೀನಪಾಷ ಆಗ್ರಹಿಸಿದರು.

ಬೇಡಿಕೆ ಈಡೇರಿಕೆಗೆ ಮನವಿ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ಫಸಲ್‌ ಬಿಮಾ ಯೋಜನೆಯಡಿ ರೈತರಿಗೆ ನ್ಯಾಯ ಒದಗಿಸಬೇಕು. ಮಿನಿ ವಿಧಾನಸೌಧಕ್ಕೆ ಎಲ್ಲ ಕಚೇರಿಗಳ ಸ್ಥಳಾಂತರ ಮಾಡಿಸಬೇಕು. ನಕಲಿ ಬೀಜ ಕ್ರಿಮಿನಾಶಕ ತಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮುಂದಾಗಬೇಕು’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಮರಯ್ಯ ಗೋನಾಳಮಠ ಮನವಿ ಮಾಡಿದರು.

ಎಸ್‌ಟಿ ಗುಂಪಿಗೆ ಸೇರಿಸಿ: ಹಾಲುಮತ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ ಗುಂಪಿಗೆ ಸೇರ್ಪಡೆ ಮಾಡುವ ಮೂಲಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ನೀಡುವಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆ ಮುಖಂಡರು ಒತ್ತಾಯಿಸಿದರು.

ಹಕ್ಕೊತ್ತಾಯ: ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಯೋಜನೆಗಳಲ್ಲಿ ನೀಡಬಹುದಾದ ಅಂಗವಿಕಲ ಮೀಸಲಾತಿ ಸೌಲಭ್ಯ ತಮಗೆ ದೊರಕುತ್ತಿಲ್ಲ. ಉದ್ಯೋಗದಲ್ಲಿ, ವಿವಿಧ ಯೋಜನೆಗಳಲ್ಲಿ ಶೇ 10ರಷ್ಟು ಮೀಸಲಾತಿ ನೀಡಿ ಸಾಮಾಜಿಕವಾಗಿ ಕಳಂಕಕ್ಕೆ ಒಳಗಾದ ತಮಗೆ ನ್ಯಾಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯದ ಮನವಿ ಸಲ್ಲಿಸಿದರು.

ಗ್ರಂಥಾಲಯ ಮಂಜೂರಾತಿಗೆ ಮನವಿ: ತಾಲ್ಲೂಕಿನ ಆಶಿಹಾಳತಾಂಡಾಕ್ಕೆ ಪ್ರತ್ಯೇಕ ಗ್ರಂಥಾಲಯ ಮಂಜೂರು ಮಾಡುವುದು ಸೇರಿದಂತೆ ತಾಂಡಾ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ಯಾಕೇಜ್‌ ಘೋಷಿಸಿ ಪ್ರೋತ್ಸಾಹಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಬೋದುನಾಯ್ಕ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.