ADVERTISEMENT

ಅಂತರ್ಜಲ ವೃದ್ಧಿಗೆ ‘ನೆಲ–ಜಲ ಸಂರಕ್ಷಣೆ’

ಉಮಾಪತಿ ಬಿ.ರಾಮೋಜಿ
Published 24 ಏಪ್ರಿಲ್ 2017, 6:17 IST
Last Updated 24 ಏಪ್ರಿಲ್ 2017, 6:17 IST

ಶಕ್ತಿನಗರ: ಸಗಮಕುಂಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಟ, ಸಗಮಗುಂಟ ಗ್ರಾಮಗಳಲ್ಲಿ ಆರಂಭಿ ಸಿರುವ ‘ನೆಲ, ಜಲ ಸಂರಕ್ಷಣಾ ಕಾಮಗಾರಿ’ ರೈತರ ಪುನಶ್ಚೇತನಕ್ಕೆ ಕಾರಣವಾಗಿದೆ.

ಅಲ್ಲದೆ, ರೈತರು, ಕೂಲಿ ಕಾರ್ಮಿಕರು ಗುಳೆ  ಹೋಗುವುದನ್ನು ತಪ್ಪಿಸಿದೆ.

ಕಾಮಗಾರಿ ಕುರಿತು ಮಾಹಿತಿ ನೀಡಿದ ಸಗಮಕುಂಟ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್‌, ‘ನರೇಗಾ ಯೋಜನೆ ಅಡಿ ಈ ಕಾಮಗಾರಿ ಆರಂಭಿಸಲಾಗಿದೆ. ಮಳೆ ನೀರನ್ನು ಜಮೀನಿನಲ್ಲಿ ಇಂಗುವಂತೆ ಮಾಡುವುದು ಈ ಕಾಮಗಾರಿಯ ಉದ್ದೇಶ’ ಎಂದರು.

ADVERTISEMENT

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜಮೀನಿನಲ್ಲಿ ಮಳೆ ನೀರು ಹರಿದು ಹೋಗದಂತೆ ಇಳಿಜಾರಿನಲ್ಲಿ ಬದುಗಳನ್ನು ನಿರ್ಮಿಸುವುದು, ಮಣ್ಣಿನ ಸವಕಳಿ ತಪ್ಪಿಸುವುದು, ಕೃಷಿ ಹೊಂಡ, ಚೆಕ್‌ ಡ್ಯಾಂ, ಬಾವಿಯಲ್ಲಿ ಹೂಳ ತೆಗೆಯುವ ಕೆಲಸವನ್ನು ಕಾಮಗಾರಿಯಲ್ಲಿ ಮಾಡಲಾಗುತ್ತಿದೆ. ಮಾರ್ಚ್‌ ಮೊದಲ ವಾರ ಕಾಮಗಾರಿ ಆರಂಭವಾಗಿದ್ದು, 500 ಕೂಲಿ ಕಾರ್ಮಿಕರು ಕಾಮ ಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ 11 ಕಿರು ಜಲಾನಯನ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದ್ದು, ಸುಮಾರು 400 ಹೆಕ್ಟೇರ್ ಕೃಷಿ ಭೂಮಿಯ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಸುಮಾರು 50 ಸಾವಿರ ಕೂಲಿ ದಿನ ಸೃಷ್ಟಿಸುವು ಗುರಿ ಹೊಂದಲಾಗಿದೆ’  ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್. ಅಶೋಕ ಹೇಳಿದರು.

‘ಮಳೆಗಾಲದಲ್ಲಿ ಜಮೀನಿನಲ್ಲಿ ನೀರು ಹರಿದು ಹೋಗುವುದರ ಜತೆಗೆ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿತ್ತು. ಕಾಮಗಾರಿಯಲ್ಲಿ ಬದು ನಿರ್ಮಾಣ ಮಾಡಿರುವುದರಿಂದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಯಬಹುದು. ಅಲ್ಲದೆ, ನೀರು ಇಂಗುವುದರಿಂದ ಜಮೀನಿನಲ್ಲಿ ತೇವಾಂಶ ಇರುತ್ತದೆ’ ಎಂದು ಸಗಮ ಕುಂಟ ರೈತ ಪಾಗುಂಟಪ್ಪ ಅವರು ಹೇಳಿದರು.

‘ಮನುಷ್ಯನ ದುರಾಸೆಯಿಂದ ಕಾಡು ನಾಶವಾಗುತ್ತಿದೆ. ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ನೀರಿನ ಸಂರಕ್ಷಣೆ ಮಾಡದಿದ್ದರೆ, ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದೆ ಇನ್ನೂ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

**

ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ನೀರು ಇಂಗುವಂತೆ ಮಾಡಿದರೆ ಅಂತರ್ಜಲಮಟ್ಟ  ಹೆಚ್ಚುತ್ತದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು.
-ರವಿಕುಮಾರ, ಪಿಡಿಒ, ಸಗಮಕುಂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.