ADVERTISEMENT

ಅಧಿಕಾರಿಗಳಿಂದ ಕಾಮಗಾರಿ ವಿಳಂಬ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:17 IST
Last Updated 16 ಏಪ್ರಿಲ್ 2017, 9:17 IST

ರಾಯಚೂರು: ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಮೂಲಕ ಜಿಲ್ಲೆಗೆ ಸಾಕಷ್ಟು ಅನುದಾನ ಬರುತ್ತಿದ್ದರೂ ಕಾಮಗಾರಿಗಳು ಆಮೆಗತಿಯಲ್ಲಿವೆ. ಅಧಿಕಾರಿಗಳ ಜಡತ್ವ ಧೋರಣೆಯಿಂದ ಕಾಮಗಾರಿಗಳ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಟ್‌  ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 2017–18 ನೇ ಸಾಲಿನ ಎಚ್‌ಕೆಆರ್‌ಡಿಬಿ ಕ್ರಿಯಾ ಯೋಜನೆಗಳ ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಏಪ್ರಿಲ್‌ 28 ರಂದು ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು ಕಾಮಗಾರಿಗಳ ಸೂಕ್ತ ಮಾಹಿತಿಯನ್ನು ಒದಗಿಸಬೇಕು. ಸಭೆಗೆ ಪೂರ್ವ ಸಿದ್ಧತೆ ಮಾಡಿಕೊಂಡು ಬರದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ನಿಗದಿತ ಅವಧಿಯಲ್ಲಿ ಕೆಲಸಗಳು ನಡೆಯದ ಕಾರಣದಿಂದ ಜಿಲ್ಲೆಯಿಂದ ಅನುದಾನ ವಾಪಸಾಗುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮುಗಿದು ತಿಂಗಳಾದರೂ ಕೆಲಸ ಆರಂಭಿಸಿಲ್ಲ ಎಂದು ಸಭೆಯಲ್ಲಿದ್ದ ಶಾಸಕರಾದ ಬಾದರ್ಲಿ ಹಂಪನಗೌಡ, ಪ್ರತಾಪಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಬೋಸರಾಜು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಲಿಂಗಸುಗೂರು ತಾಲ್ಲೂಕಿನಲ್ಲಿ ಕೈಗೊಂಡ ರಸ್ತೆಯೊಂದರ ಕಾಮಗಾರಿಗೆ ಸರಿಯಾದ ಅಂದಾಜು ಪಟ್ಟಿ ತಯಾರಿಸಿಲ್ಲ. ಹೀಗಾಗಿ ಕಾಮಗಾರಿ ಬಗ್ಗೆ ವಿವಾದ ಎದ್ದು ಕೆಲಸ ಸ್ಥಗಿತಗೊಂಡಿದೆ. ನೀರಾವರಿ ಜಮೀನಿನಲ್ಲಿ ರಸ್ತೆ ಹಾದು ಹೋಗುವುದರಿಂದ ಜಮೀನು ಮಾಲೀಕರು ತಕರಾರು ಎತ್ತಿದ್ದಾರೆ. ಇದರಿಂದ ಮೂರು ವರ್ಷಗಳಿಂದ ಕೆಲಸವಾಗಿಲ್ಲ. ಕೂಡಲೇ ಈ ಕಾಮಗಾರಿ ಅನುಷ್ಠಾನವನ್ನು ಹೈದರಾಬಾದ್‌ ಕರ್ನಾಟಕ ಉನ್ನತ ಸಮಿತಿ ವ್ಯಾಪ್ತಿಯಿಂದ ಜಿಲ್ಲಾಧಿಕಾರಿಗೆ ವಹಿಸಬೇಕು ಎಂದು ಶಾಸಕ ಬಾದರ್ಲಿ ಹಂಪನಗೌಡ ಅವರು ಕೋರಿದರು.

ಕಳೆದ ಐದು ವರ್ಷಗಳಲ್ಲಿ ನಡೆದ ಕಾಮಗಾರಿಗಳ ಬಗ್ಗೆ ವಿವರವನ್ನು ವಿಡಿಯೋ ಚಿತ್ರೀಕರಣ ಸಹಿತ ತರಬೇಕು. ಮುಂದಿನ ಸಭೆಯಲ್ಲಿ ಪವರ್‌ ಪ್ರಜೆಂಟೇಷನ್‌ ಮಾಹಿತಿ ಕೊಡಬೇಕು. ಪ್ರತಿಯೊಂದು ಸಭೆಗೂ ಪೂರ್ವಾಲೋಚನೆಯಿಂದ ಹಾಜರಾ ಗಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕ ತಿಪ್ಪರಾಜು ಹವಾಲ್ದಾರ, ಜಿಲ್ಲಾಕಾರಿ ಡಾ.ಗೌತಮ ಬಗಾದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.