ADVERTISEMENT

ಅಭಿವೃದ್ಧಿ ವೇಗ ಕುಂಠಿತ: ಸಚಿವ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:57 IST
Last Updated 16 ಮೇ 2017, 8:57 IST

ರಾಯಚೂರು: ನಗರದಲ್ಲಿ ನಡೆಯುತ್ತಿರುವ ನಿರಂತರ ನೀರು ಸರಬರಾಜು ಯೋಜನೆ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೂನ್ ಮೊದಲ ವಾರ ಮತ್ತೆ ರಾಯಚೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್‌ ಹೇಳಿದರು.

ನಗರದಲ್ಲಿ ಕೌಶಲ್ಯ ಕರ್ನಾಟಕ ನೋಂದಣಿ ಅಭಿಯಾನ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ‘ಕಲಬುರ್ಗಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸಭೆಗೆ ಹಾಜರಾಗುತ್ತಾರೆ. ಅನುದಾನವಿದ್ದರೂ ಅಭಿವೃದ್ಧಿಯ ವೇಗ ಏಕೆ ಕಡಿಮೆ ಇದೆ ಏನ್ನುವ ಬಗ್ಗೆ ಪರಿಶೀಲಿಸಲಾಗುವುದು.

ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಧೋರಣೆ ಬದಲಿಸಿಕೊಳ್ಳಬೇಕು. ದಕ್ಷ ಮತ್ತು ವೇಗವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸುತ್ತಾ ಬಂದಿದ್ದೇನೆ. ಆದರೂ ಕೆಲಸಗಳ ವೇಗ ಹೆಚ್ಚಳವಾಗುತ್ತಿಲ್ಲ’ ಎಂದು ಹೇಳಿದರು.

ADVERTISEMENT

ಫಲಿತಾಂಶದಿಂದ ಕೊರಗು: ‘ಉಸ್ತುವಾರಿ ವಹಿಸಿಕೊಂಡ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಕಡಿಮೆಯಾಗಿರುವ ಬಗ್ಗೆ ನನಗೂ ಕೊರಗು ಇದೆ. ಜೀವನದಲ್ಲಿ ಸಿಹಿ ಮತ್ತು ಕಹಿ ಇರುವಂತೆ ಎಲ್ಲವನ್ನು ಸಹಿಸಿಕೊಳ್ಳಬೇಕು. ಫಲಿತಾಂಶ ಸುಧಾರಣೆಗಾಗಿ ಜಿಲ್ಲೆಯಲ್ಲಿ ವಿಶೇಷ ಬೋಧನಾ ವ್ಯವಸ್ಥೆ ರೂಪಿಸುವಂತೆ ತಿಳಿಸಲಾಗಿದೆ. ಪೂರಕ ಪರೀಕ್ಷೆಗಾಗಿ ವಿಶೇಷ ತರಗತಿ ನಡೆಸಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ್ ನಾಯಕ, ಶಾಸಕ ಡಾ. ಶಿವರಾಜ ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಇಟಗಿ, ನಗರಸಭೆ ಅಧ್ಯಕ್ಷೆ ಹೇಮಾವತಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್ ಇದ್ದರು.

‘ಗೊಂದಲ ನಿವಾರಣೆ ಶೀಘ್ರ ’
‘ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಅವ್ಯವಹಾರ ನಡೆಸಿದ್ದಕ್ಕಾಗಿ ಮಾನ್ವಿಯ ಕಳಿಂಗ ಪಿಯು ಕಾಲೇಜಿನ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. ಈಗ ಮತ್ತೆ ಕಾಲೇಜು ಪ್ರವೇಶ ಆರಂಭಿಸಿದ್ದರಿಂದ ಪಾಲಕರು ಗೊಂದಲದಲ್ಲಿ ಇದ್ದಾರೆ. ಬೆಂಗಳೂರಿಗೆ ಹೋಗಿ ಕಡತ ಪರಿಶೀಲಿಸಿದ ಬಳಿಕ ಈ ಗೊಂದಲವನ್ನು ನಿವಾರಿಸುತ್ತೇನೆ’ ಸಚಿವ ತನ್ವೀರ್ ಸೇಠ್‌ ಹೇಳಿದರು.

ಪ್ರಶ್ನೆಪತ್ರಿಕೆಯ ಒಂದು ಪುಟವನ್ನು ಸೋರಿಕೆ ಮಾಡಿದ್ದಕ್ಕೆ ಮೂರು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ಸಲ್ಲಿಸಿದ್ದಾರೆ. ತಪ್ಪನ್ನು ಮೂವರು ವ್ಯಕ್ತಿಗಳು ಮಾಡಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಯಿಂದ ಯಾವುದೇ ತಪ್ಪುಗಳಾಗಿಲ್ಲ ಎನ್ನುವ ಅಂಶ ಅದರಲ್ಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಮಗ್ರವಾಗಿ ಅವಲೋಕಿಸಿ ಮಾನ್ವಿ ಪಾಲಕರ ಗೊಂದಲ ನಿವಾರಿಸಲಾಗುವುದು ಎಂದು ತಿಳಿಸಿದರು.

*

ಎಚ್‌ಕೆಆರ್‌ಡಿಬಿ ಮ್ಯಾಕ್ರೊ ಮತ್ತು ಮೈಕ್ರೊ ಯೋಜನೆಗಳು ಏನೆಂದು ಅರ್ಥವಾಗಿಲ್ಲ. ಹೈ.ಕ ಭಾಗಕ್ಕೆ  ನಿರಂತರ ಹಣ ಕೊಡಲು ಸಿದ್ಧ. ಆದರೆ ಕೆಲಸಗಳು ವಿಳಂಬವಾಗಿ ನಡೆಯುತ್ತಿವೆ.
ತನ್ವೀರ್‌ ಸೇಠ್‌
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.