ADVERTISEMENT

ಅವಿರೋಧ ಆಯ್ಕೆ: ಜೆಡಿಎಸ್‌ನಲ್ಲಿ ಹುಮ್ಮಸ್ಸು

ಗುರುಗುಂಟಾ: ಮಂಡಿಯೂರಿದ ಕಾಂಗ್ರೆಸ್‌–ಬಿಜೆಪಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2016, 7:10 IST
Last Updated 13 ಫೆಬ್ರುವರಿ 2016, 7:10 IST

ಲಿಂಗಸುಗೂರು: ತಾಲ್ಲೂಕಿನ ಗುರುಗುಂಟಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜಾತ್ಯತೀತ ಜನತಾ ದಳದ ಅಭ್ಯರ್ಥಿ ರಾಣಿ ಜಯಲಕ್ಷ್ಮಿ ರಾಜಾ ಅಮರಪ್ಪ ನಾಯಕ ಅವಿರೋಧ ಆಯ್ಕೆ ತಾಲ್ಲೂಕಿನ ಇತರೆ ಕ್ಷೇತ್ರಗಳ ಅಭ್ಯರ್ಥಿ ಹಾಗೂ ಕಾರ್ಯಕರ್ತರಲ್ಲಿ ಭಾರಿ ಹುಮ್ಮಸ್ಸು ಮೂಡಿಸಿದೆ.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ದೇವಮ್ಮ ಹನುಮಂತ, ಭಾರತೀಯ ಜನತಾ ಪಕ್ಷದ ಚಂದ್ರಸುಧಾ ಗೌರಿಶಂಕರ ನಾಯಕ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ರಾಣಿತಾರಾ ರಾಜಾಸೋಮನಾಥ ನಾಯಕ, ಅನುಸೂಯಾದೇವಿ ಗಜೇಂದ್ರ ನಾಯಕ ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.

ಗುರುಗುಂಟಾ ಮತ್ತು ಗುಂತಗೋಳ ಸಂಸ್ಥಾನಿಕರ ನೆರಳಲ್ಲಿಯೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ನಡೆಸುತ್ತಿವೆ. ರಾಣಿಜಯಲಕ್ಷ್ಮಿದೇವಿ ಅವರ ಪತಿ ಗುರುಗುಂಟಾ ಸಂಸ್ಥಾನದ ದಿವಂಗತ ರಾಜಾ ಅಮರಪ್ಪ ನಾಯಕ 1983ರಲ್ಲಿ ಮಾನ್ವಿ, 1985ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ಶಾಸಕರಾಗಿದ್ದರು. ಪುತ್ರ ರಾಜಾಸೋಮನಾಥ ನಾಯಕ 3 ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.

ರಾಣಿಜಯಲಕ್ಷ್ಮಿದೇವಿ ತವರು ಮನೆ ತಾಲ್ಲೂಕಿನ ಗುಂತಗೋಳ ಸಂಸ್ಥಾನ ಕೂಡ ರಾಜಕೀಯದಲ್ಲಿ ತನ್ನದೆ ಆದ ಛಾಪು ಉಳಿಸಿಕೊಂಡು ಬಂದಿದೆ. ಅವರ ಸಹೋದರರಾದ ರಾಜಾಅಮರೇಶ್ವರ ನಾಯಕ, ರಾಜಾ ರಾಯಪ್ಪ ನಾಯಕ ಶಾಸಕರಾಗಿ, ಸಚಿವರಾಗಿ ಗುರುತಿಸಿಕೊಂಡಿದ್ದಾರೆ. ಇನ್ನೋರ್ವ ಸಹೋದರ ರಾಜಾ ಶ್ರೀನಿವಾಸ ನಾಯಕ ಗ್ರಾಪಂ ಮತ್ತು ಜಿಪಂ ಸದಸ್ಯರಾಗಿ ರಾಜಕೀಯ ಹಿಡಿತವನ್ನು ಮುಂದುವರೆಸಿದ್ದಾರೆ.

ರಾಣಿಜಯಲಕ್ಷ್ಮಿದೇವಿ ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೂಡ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಗೊಂಡಿದ್ದರು. ಈ ಬಾರಿಯ ಅವಿರೋಧ ಆಯ್ಕೆ 2ನೇ ಬಾರಿಗೆ ಆಯ್ಕೆ ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಘಟಾನುಘಟಿಗಳಿದ್ದು ಮುಂಚೂಣಿ ನಾಯಕತ್ವ ಯಾರದ್ದು ಎಂಬುದು ಪ್ರಶ್ನೆಯಾಗಿದೆ. ಬಿಜೆಪಿಗೆ ಅಭಿಮಾನಿ ಕಾರ್ಯಕರ್ತರಿದ್ದು, ಸಮರ್ಥ ನಾಯಕತ್ವ ಇಲ್ಲದೆ ಅನಾಥವಾಗಿದೆ. ಈ ಎರಡು ಪಕ್ಷಗಳಲ್ಲಿನ ಅಂತರಿಕ ಅಭದ್ರತೆ ಲಾಭ ಜೆಡಿಎಸ್‌ಗೆ ಲಾಭವಾಗಿ ಪರಿಣಮಿಸುವ ಸಾಧ್ಯತೆ ಇದೆ.

***
ಗುರುಗುಂಟಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸತತ 2ನೇ ಬಾರಿಗೆ ಆಯ್ಕೆಗೊಳ್ಳಲು ಸಹಕರಿಸಿದ ಈ ಭಾಗದ ಮುಖಂಡರು, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವೆ.
-ರಾಣಿಜಯಲಕ್ಷ್ಮಿದೇವಿ,
ಜಿಲ್ಲಾ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.