ADVERTISEMENT

ಆಸ್ಪತ್ರೆ ನೌಕರರ ಸಂಘದ ಪ್ರತಿಭಟನೆ

ಒಪೆಕ್‌ ಆಸ್ಪತ್ರೆ ಖಾಸಗಿಯವರಿಗೆ ವಹಿಸುವ ತೀರ್ಮಾನ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 10:33 IST
Last Updated 4 ಮಾರ್ಚ್ 2017, 10:33 IST

ರಾಯಚೂರು: ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (ಒಪೆಕ್‌) ಖಾಸಗಿಯವರಿಗೆ ವಹಿಸುವ ತೀರ್ಮಾನ ಕೈಬಿಡಲು ಆಗ್ರಹಿಸಿ ಒಪೆಕ್‌ ಆಸ್ಪತ್ರೆ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಹತ್ತಿರ ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸರಿಯಾದ ಮಾನ್ಯತೆ ದೊರೆತಿಲ್ಲ. ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಯೂ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ವಹಿಸುವ ಪ್ರಕ್ರಿಯೆಗಳು ನಡೆದಿರುವುದು ಆತಂಕ ತಂದಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಅಗತ್ಯವಾದ ಹಣಕಾಸು ನೆರವು ಒದಗಿಸುವುದು ಹಾಗೂ 411 ಹುದ್ದೆಗಳ ಭರ್ತಿಯ ಮೂಲಕ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳನ್ನು ತೆರೆದು ಹೈದರಾಬಾದ್‌ ಕರ್ನಾಟಕ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಭರವಸೆ ನಿಡಿದ್ದಾರೆ. ಆದರೆ, ಸಂಸದರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಒಪೆಕ್‌ ಆಸ್ಪತ್ರೆ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲು ನಿರ್ಣಯ ಕೈಗೊಂಡಿರುವುದು ಜನ ವಿರೋಧಿಯಾಗಿದೆ ಎಂದು ದೂರಿದರು.

ಜಿಲ್ಲೆಯ ಕೆಲ ಶಾಸಕರು ಈ ಆಸ್ಪತ್ರೆಯ ಗುತ್ತಿಗೆ ಪಡೆಯುವ ಸಂಚು ನಡೆಸಿದ್ದಾರೆ. ರಿಮ್ಸ್‌ ಆಸ್ಪತ್ರೆಯನ್ನು ಉದ್ದೇಶಪೂರ್ವಕವಾಗಿ 3ನೇ
ದರ್ಜೆಗೆ ಇಳಿಸಲಾಗಿದೆ ಎಂದು ಆರೋಪಿಸಿದರು.

ಆಸ್ಪತ್ರೆ ಖಾಸಗೀಕರಣಗೊಂಡರೆ 200ಕ್ಕೂ ಅಧಿಕ ಸಿಬ್ಬಂದಿ ಬೀದಿಗೆ ಬೀಳುತ್ತಾರೆ. ಆದ್ದರಿಂದ ಸರ್ಕಾರದಿಂದಲೇ ಆಸ್ಪತ್ರೆ ನಿರ್ವಹಿಸಬೇಕು. ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ರಿಮ್ಸ್‌ ಆಡಳಿತದಿಂದ ಒಪೆಕ್‌ ಬಿಡುಗಡೆಗೊಳಿಸಿ ಸ್ವಾಯತ್ತ ಮಂಡಳಿ ರಚಿಸಬೇಕು. ಒಪೆಕ್‌ ನೆರವಿನ ಆಶಯಕ್ಕೆ ಧಕ್ಕೆಯಾಗದಂತೆ ಆರೋಗ್ಯ ಸಂರಕ್ಷಣೆ ಹೊಣೆ ಸರ್ಕಾರ ನಿಭಾಯಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಾಜೀದ್ ಅಲಿ, ಮುಖಂಡರಾದ ಆರ್. ಮಾನಸಯ್ಯ, ಜಗದೀಶ, ಸಂಪತ ಕುಮಾರಿ, ಎನ್.ಕುಮಾರ, ನಾಗರಾಜ, ವೀರೇಶ, ಜಿಂದಾವಲಿ, ತಿಪ್ಪಣ್ಣ, ರಾಘವೇಂದ್ರ, ವೀರೇಶ, ಗಣೇಶ, ಚನ್ನಬಸವ, ಸುರೇಂದ್ರ, ಗೋವಿಂದರಾಜ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.