ADVERTISEMENT

'ಇಂದ್ರಧನುಷ್‌ ವಿಶೇಷ ಲಸಿಕಾ ಅಭಿಯಾನ'

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 6:55 IST
Last Updated 6 ಜುಲೈ 2015, 6:55 IST

ಸಿಂಧನೂರು: ಎರಡು ವರ್ಷದ ಒಳಗಿನ ಮಕ್ಕಳುಹಾಗೂ ಗರ್ಭಿಣಿಯರು ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳುವುದು ಮಷಿನ್ ಇಂದ್ರಧನುಷ ಉದ್ಧೇಶವಾಗಿರುವುದರಿಂದ ಸಮರೋಪಾದಿಯಲ್ಲಿ ಕ್ರಮ ಜರುಗಿಸುವುದು ಸಿಬ್ಬಂದಿ ಕರ್ತವ್ಯವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದರು.

ನಗರದ ತಾಲ್ಲೂಕು ಆರೋಗ್ಯಾಧಿಕಾರಿ ಕಾರ್ಯಾಲಯದಲ್ಲಿ ಭಾನುವಾರ ಜರುಗಿದ ಭಾರತ ಸರ್ಕಾರದ 'ಇಂದ್ರಧನುಷ್‌ ವಿಶೇಷ ಲಸಿಕಾ ಅಭಿಯಾನ' ದ ತಾಲ್ಲೂಕು ಮಟ್ಟದ ತರಬೇತಿ ಶಿಬಿರದಲ್ಲಿ  ಮಾತನಾಡಿದರು. 4ನೇ ಸುತ್ತಿನ ಇಂದ್ರಧನುಷ ಲಸಿಕಾ ಅಭಿಯಾನ ಜುಲೈ 7 ರಿಂದ 15 ರವರೆಗೆ ಜರುಗಲಿದ್ದು ಮನೆ ಭೇಟಿಯ ಸಮೀಕ್ಷೆಯ ಮೂಲಕ ಲಸಿಕೆ ವಂಚಿತ ಎಲ್ಲ ಮಕ್ಕಳನ್ನು ಪತ್ತೆ ಹಚ್ಚಿ ಅಗತ್ಯ ಲಸಿಕೆಗಳನ್ನು ನೀಡುವ ಜೊತೆಗೆ ಮಕ್ಕಳನ್ನು 9 ಮಾರಕ ರೋಗಗಳಿಂದ ರಕ್ಷಿಸಲು ಎಲ್ಲರೂ ಶ್ರಮಿಸಬೇಕು ಎಂದು ಸೂಚಿಸಿದರು.

ಏಕಕಾಲಕ್ಕೆ ಕರ್ನಾಟಕದ ರಾಯಚೂರ, ಕೊಪ್ಪಳ, ಬಳ್ಳಾರಿ, ಯಾದಗಿರಿ, ಕಲಬುರಗಿ, ಬೆಂಗಳೂರ ನಗರ ಜಿಲ್ಲೆಗಳು ಸೇರಿದಂತೆ ದೇಶದ 201 ಜಿಲ್ಲೆಗಳಲ್ಲಿ ಖಾಲಿ ಇರುವ ಉಪಕೇಂದ್ರಗಳು, ಡಿಫ್ತೀರಿಯಾ ಹಾಗೂ ದಡಾರ ಬಾಧಿತ ಗ್ರಾಮಗಳು, ಸ್ಲಂ ಪ್ರದೇಶ, ತೋಟದ ಮನೆ, ತಾಂಡಾ, ಕಟ್ಟಡ ಕಾಮಗಾರಿ ಸ್ಥಳ, ಅಲೆಮಾರಿಗಳ ವಾಸಸ್ಥಳ ಮತ್ತಿತರ ಕಡೆಗಳಲ್ಲಿ ವಾಸಿಸುವ 2 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ ಬಿ.ಪಾಟೀಲ ತಾಲೂಕಿನಲ್ಲಿ ಕಳೆದ ಏಪ್ರೀಲ್ನಿಂದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹುಟ್ಟಿನಿಂದ ಎಲ್ಲ ಮಕ್ಕಳಿಗೆ ಬಿಸಿಜಿ, ಹೆಪಟೈಟಸ್ ಬಿ ಮತ್ತಿತರ ಮಾರಕ ರೋಗಗಳಿಗೆ ಲಸಿಕೆ ಹಾಕಲಾಗಿದೆ ಎಂದು ವಿವರಿಸಿದರು. ತರಬೇತಿ ಶಿಬಿರದಲ್ಲಿ ಜಿಲ್ಲಾ ಲಸಿಕಾ ಮೇಲ್ವಿಚಾರಕ ಕೋಪ್ರೇಶ ಕುಮಾರ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಯೋಗಿತಾಬಾಯಿ, ಅಶೋಕ ಎಂ, ವೈದ್ಯಾಧಿಕಾರಿ ಡಾ ರಮ್ಯದೀಪಿಕಾ, ಸೇರಿದಂತೆ ಹಲವಾರು ವೈದ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.