ADVERTISEMENT

ಇಂಧನ ಸಚಿವರಿಂದ ಗೊಂದಲದ ಉತ್ತರ: ತಿಪ್ಪರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:47 IST
Last Updated 19 ನವೆಂಬರ್ 2017, 6:47 IST

ರಾಯಚೂರು: ‘ರಾಯಚೂರು ತಾಲ್ಲೂಕಿಗೆ ನಿರಂತರ ವಿದ್ಯುತ್‌ ಕಲ್ಪಿಸುವ ವಿಷಯಕ್ಕೆ ಸಂಬಂಧ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅಧಿವೇಶನದಲ್ಲಿ ಗೊಂದಲದ ಉತ್ತರ ನೀಡಿದ್ದು, ಹೀಗಾಗಿ ವಿದ್ಯುತ್‌ ಬೇಡಿಕೆ ಈಡೇರಿಸಲು ಒತ್ತಾಯಿಸಿ ನ.27 ರಿಂದ ಯೋಜನೆಯ ಪ್ರಕಾರವೇ ಪಾದಯಾತ್ರೆ ನಡೆಸಲಾಗುವುದು’ ಎಂದು ಶಾಸಕ ತಿಪ್ಪರಾಜು ಹವಾಲ್ದಾರ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಂತ್ರಿಕ ಅಡಚಣೆ ಹೊರತುಪಡಿಸಿ 24 ಗಂಟೆಗಳ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಭಾಗದ 13 ಫೀಡರ್‌ಗಳಿಂದ ಪ್ರತಿದಿನ 22 ರಿಂದ 24 ಗಂಟೆಗಳವರೆಗೆ ವಿದ್ಯುತ್‌ ಸರಬರಾಜು ಆಗುತ್ತಿದೆ ಎಂದು ಸಚಿವರು ಹೇಳಿರುವುದು ಸತ್ಯಕ್ಕೆ ದೂರವಾಗಿದೆ’ ಎಂದರು.

‘ಆರ್‌ಟಿಪಿಎಸ್‌ನಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ನಿವೇಶನದ ಹಕ್ಕು ಪತ್ರ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸಚಿವರು ಲಿಖಿತವಾಗಿ ನೀಡಿದ ಉತ್ತರವು ಗೊಂದಲದಿಂದ ಕೂಡಿದೆ. ನಿರಂತರ ವಿದ್ಯುತ್‌ ಪೂರೈಸುವ ಬೇಡಿಕೆ ಈಡೇರುವವರೆಗೂ ಆರ್‌ಟಿಪಿಎಸ್‌ ಎದುರು ಶಾಸಕ ಡಾ.ಶಿವರಾಜ ಪಾಟೀಲ ಹಾಗೂ ನಾನು ಡಿಸೆಂಬರ್‌ 1 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಈ ಹೋರಾಟಕ್ಕೆ ರೈತರು ಹಾಗೂ ಜನಸಾಮಾನ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯ ಪೂರ್ವ ಸಿದ್ಧತೆ ಸಭೆಯನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ವಿದ್ಯುತ್‌ ಬೇಡಿಕೆ ವಿಷಯದಲ್ಲಿ ಪಕ್ಷಭೇದ ಮರೆತು ಹೋರಾಟ ನಡೆಸಲಾಗುತ್ತದೆ. ರಾಜಕೀಯ ಗಿಮಿಕ್‌ಗಾಗಿ ಹೋರಾಟ ನಡೆಸುವ ಅನಿವಾರ್ಯತೆ ನನಗಿಲ್ಲ. ಬೇರೆ ರೀತಿಯ ರಾಜಕೀಯ ಮಾಡುವಷ್ಟು ಸಾಮರ್ಥ್ಯ ನನಗಿದೆ. ಕಾಂಗ್ರೆಸ್‌ ಮುಖಂಡರು ವಿನಾಕಾರಣ ಆರೋಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಡೆಸುವುದನ್ನು ಕೈಬಿಡುವುದಿಲ್ಲ. ಇದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹೋರಾಟ ಮಾಡಬೇಕಿರುವ ಕಾರಣದಿಂದ ಅಧಿ ವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.