ADVERTISEMENT

ಉದ್ಯೋಗಿಗಳ ನೋಂದಣಿಗೆ ಅಭಿಯಾನ: ಅರುಣಶೇಖರ್

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:28 IST
Last Updated 19 ಮೇ 2017, 5:28 IST

ರಾಯಚೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಯಿಂದ ಉದ್ಯೋಗದಾತ (ಎಂಪ್ಲಾಯರ್‌) ಕಂಪೆನಿಗಳಿಗಾಗಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ನೋಂದಣಿ ಮಾಡದಿರುವ ಉದ್ಯೋಗಿಗಳ ನೋಂದಣಿಗೆ ವಿಶೇಷ ಕಾಲಾವಕಾಶ ನೀಡಲಾಗಿದೆ ಎಂದು ಎಪಿಎಫ್‌ಒ ರಾಯಚೂರು ಪ್ರಾದೇಶಿಕ ಕಚೇರಿಯ ಆಯುಕ್ತ ಅರುಣ ಶೇಖರ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಶೇ 12 ಬಡ್ಡಿ ಮತ್ತು ಉದ್ಯೋಗದಾತರ ಪಾಲಿನ ಕಂತು ಕಟ್ಟಿದರೆ ಸಾಕು. ಸೆಕ್ಷನ್ 7ಎ ಅಡಿಯಲ್ಲಿ ವಿಚಾರಣೆಯನ್ನೂ ಮಾಡಲಾಗುವುದಿಲ್ಲ. ಉದ್ಯೋಗಿಗಳನ್ನು ಘೋಷಿಸಿಕೊಂಡ 15 ದಿನಗಳ ಒಳಗಾಗಿ ಉದ್ಯೋಗದಾತನು ತಮ್ಮ ಪಾಲಿನ ಹಣವನ್ನು ಮಾತ್ರ ಕಟ್ಟಬೇಕಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ರೋಜಗಾರ್ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿಯಲ್ಲಿ ಶೇ 8.33ರಷ್ಟು ಉದ್ಯೋಗದಾತರಿಗೆ ಎಪಿಎಸ್ ಕೊಡುಗೆ ನೀಡಲಾಗುತ್ತದೆ. ಉದ್ಯೋಗದಾತ ಕಂಪೆನಿಯು ಪ್ರತಿ ತಿಂಗಳು 15 ರೊಳಗಾಗಿ ಉದ್ಯೋಗಿಗಳ ಪಾಲಿನ ವಂತಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕು. ಅರ್ಹ ಕಾರ್ಮಿಕರನ್ನು ಪಿಪಿಎಫ್‌ಒ ಕಚೇರಿಯಲ್ಲಿ ನೋಂದಣೆ ಮಾಡಿಸಬೇಕು.

ADVERTISEMENT

ಕೆಲಸ ಬಿಡುವ ಉದ್ಯೋಗಿಗಳ ಹೊರಹೋಗುವ ನೋಂದಣಿ ಮತ್ತು ಕಂಪೆನಿಯ ಮಾಲೀಕತ್ವದ ವಿವರ ಸಲ್ಲಿಸಬೇಕು. ಪ್ರತಿಯೊಬ್ಬ ಉದ್ಯೋಗಿಗೆ ಯುಎಎನ್ ಒದಗಿಸಬೇಕು ಎಂದು ಹೇಳಿದರು. ಸಹಾಯಕ ಆಯುಕ್ತ ವಿಕ್ರಂಸಿಂಗ್ ಮಾತನಾಡಿ ‘ರಾಯಚೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಮೂರು ಜಿಲ್ಲೆಗಳಿವೆ.

ಸದ್ಯಕ್ಕೆ 1,872 ಉದ್ಯೋಗದಾತರು ನೋಂದಾಯಿಸಿಕೊಂಡಿದ್ದಾರೆ. 1.52 ಲಕ್ಷ ಉದ್ಯೋಗಿಗಳಿದ್ದಾರೆ. ಪ್ರತಿ ತಿಂಗಳು 1,5೦೦ ಜನರಿಗೆ ಪಿಂಚಣಿ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು. ಉದ್ಯೋಗಿಗಳ ಪಾಲಿನ ವಂತಿಗೆ ಕಟ್ಟದಿರುವ ಮತ್ತು ಉದ್ಯೋಗಿಗಳನ್ನು ಇಪಿಎಫ್‌ಗೆ ನೋಂದಾವಣೆ ಮಾಡದಿರುವ ಬಗ್ಗೆ ಸಾಮಾನ್ಯ ನಾಗರಿಕರು ಅಥವಾ ಉದ್ಯೋಗಿ ದೂರು ಸಲ್ಲಿಸಿದರು ಕ್ರಮಕೈಗೊಳ್ಳಲಾಗುವುದು.

ನಿಯಮ ಉಲ್ಲಂಘಿಸುವ ಉದ್ಯೋಗದಾತರ ವಿರುದ್ಧ 7ಎ ಸೆಕ್ಷನ್ ಅನ್ವಯಿಸಲಾಗುವುದು. ಇದರಡಿಯಲ್ಲಿ ಮೋಸ ಮಾಡಿದ ವಂತಿಗೆ ಪ್ರಮಾಣದಷ್ಟೆ ದಂಡ ವಿಧಿಸಲಾಗುವುದು. ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿ, ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು, ಉದ್ಯೋಗದಾತರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ವಾರಂಟ್ ಹೊರಡಿಸಲಾಗುವುದು ಹಾಗೂ ಮಾಲೀಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಭವಿಷ್ಯನಿಧಿ ಕಚೇರಿಯ ಲೆಕ್ಕಾಧಿಕಾರಿ ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.