ADVERTISEMENT

ಕಡದರಗಡ್ಡಿ: ಮತದಾನ ಬಹಿಷ್ಕಾರ ನಿರ್ಧಾರ

ದಶಕಗಳೇ ಕಳೆದರೂ ನಡುಗಡ್ಡೆ ಗ್ರಾಮಸ್ಥರಿಗೆ ಸಿಗದ ಪರಿಹಾರ, ಜಿಲ್ಲಾಡಳಿತ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 10:28 IST
Last Updated 12 ಏಪ್ರಿಲ್ 2018, 10:28 IST
ಲಿಂಗಸುಗೂರು ತಾಲ್ಲೂಕು ಕಡದರಗಡ್ಡಿ ಗ್ರಾಮಸ್ಥರು ಮಂಗಳವಾರ ಮಕ್ಕಳು ಮರಿಗಳೊಂದಿಗೆ ನದಿಯ ಕಾಲು ರಸ್ತೆ ಬಳಸಿಕೊಂಡು ದಾಟುತ್ತಿರುವುದು
ಲಿಂಗಸುಗೂರು ತಾಲ್ಲೂಕು ಕಡದರಗಡ್ಡಿ ಗ್ರಾಮಸ್ಥರು ಮಂಗಳವಾರ ಮಕ್ಕಳು ಮರಿಗಳೊಂದಿಗೆ ನದಿಯ ಕಾಲು ರಸ್ತೆ ಬಳಸಿಕೊಂಡು ದಾಟುತ್ತಿರುವುದು   

ಲಿಂಗಸುಗೂರು: ಸಮೀಪದ ಕೃಷ್ಣಾ ನದಿ ಪ್ರವಾಹ ಪೀಡಿತ ನಡುಗಡ್ಡೆ ಪ್ರದೇಶದ ಜನರ ರಕ್ಷಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗದಿರುವ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ನಡುಗಡ್ಡೆ ಪ್ರದೇಶದ ಕಡದರಗಡ್ಡಿ ಗ್ರಾಮಸ್ಥರು ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದಾರೆ.

ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಗುರುಗುಂಟಾ ಹೋಬಳಿಯ ಗುಂತಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಕೃಷ್ಣಾ ನದಿಯ ಮಧ್ಯದಲ್ಲಿ ಜಲದುರ್ಗ, ಹಂಚಿನಾಳ, ಯಳಗುಂದಿ, ಕಡದರಗಟ್ಟಿ, ಯರಗೋಡಿ, ಮಾದರಗಡ್ಡಿ ಕರಕಲಗಡ್ಡಿ ಸೇರಿದಂತೆ ಸಣ್ಣ ಪುಟ್ಟ ನದುಗಡ್ಡೆಗಳಲ್ಲಿ ಕೆಲ ಕುಟುಂಬಗಳು ಕೃಷಿ ಚಟುವಟಿಕೆಯೊಂದಿಗೆ ಬದುಕು ಕಟ್ಟಿಕೊಂಡಿವೆ. ಈ ಗ್ರಾಮಗಳಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ ಎಂಬುದು ಜನರ ಆರೋಪ.

ಕೃಷ್ಣಾ ನದಿ ಇನ್ನೊಂದು ದಡದಲ್ಲಿರುವ ಗುಂತಗೋಳ ಗ್ರಾಮ ಪಂಚಾಯಿತಿಗೆ ಸಂಪರ್ಕ ಸಾಧಿಸಲು ಹರಸಾಹಸ ಪಡುವಂತಾಗಿದೆ. ನಿತ್ಯ ಬದುಕಿಗೆ ಗೋನವಾಟ್ಲ ಬಳಿ ಕೃಷ್ಣಾ ನದಿ ದಾಟುವುದು ಅನಿವಾರ್ಯವಾಗಿದೆ. ಜೋಳ, ಸಜ್ಜೆ, ಗೋದಿ ಇತರೆ ಬೀಸಲು, ನ್ಯಾಯಬೆಲೆ ಪಡಿತರ ತರಲು, ಕಿರಾಣಿಗೆ ಗೋನವಾಟ್ಲ ಗ್ರಾಮಕ್ಕೆ ಬರಲೇಬೇಕು. ಸರ್ಕಾರದ ಪ್ರತಿಯೊಂದು ಸೌಲಭ್ಯಕ್ಕೆ ಗೋನವಾಟ್ಲ ಕೇಂದ್ರ ಸ್ಥಳವಾಗಿದೆ. ಇದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ADVERTISEMENT

‘ಶತಮಾನಗಳಷ್ಟು ಹಿಂದಿನಿಂದಲೂ ಕೃಷ್ಣಾ ಪ್ರವಾಹದ ಭೀತಿಯಲ್ಲೂ ಸುಂದರ ಬದುಕು ಕಟ್ಟಿಕೊಂಡಿದ್ದೇವೆ. ವಯೋವೃದ್ಧರು, ರೋಗಿಗಳು, ಗರ್ಭಿಣಿಯರು, ಬಾಣಂತಿಯರ ಚಿಕಿತ್ಸೆಗಾಗಿ ಹರಗೋಲು(ತೆಪ್ಪ), ಗಡಿಗೆ ಬಳಸಿ ಒರಸಿನ ಮೇಲೆ ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ಈಗಲೂ ಇಂತಹ ಸ್ಥಿತಿ ಇದ್ದು, ಜಿಲ್ಲಾಡಳಿತ ನಮ್ಮ ಕಡೆ ಗಮನಹರಿಸುತ್ತಿಲ್ಲ’ ಎಂದು ಮುದುಕಪ್ಪ ಆರೋಪಿಸುತ್ತಾರೆ.

‘30 ವರ್ಷಗಳಿಂದ ತಾಲ್ಲೂಕು, ಜಿಲ್ಲಾಡಳಿತ, ಸಚಿವರು, ಚುನಾಯಿತ ಪ್ರತಿನಿಧಿಗಳ ಜೊತೆ ಪ್ರವಾಹದ ಸಂದರ್ಭದಲ್ಲಿ ಭೇಟಿ ನೀಡಿ ಗಂಭೀರ ಸ್ಥಿತಿಯಲ್ಲಿರುವ ಸಣ್ಣಪುಟ್ಟ ನಡುಗಡ್ಡೆ ಸ್ಥಳಾಂತರ ಮತ್ತು ಗೋನವಾಟ್ಲ ಬಳಿ ಸೇತುವೆ ನಿರ್ಮಿಸಲು ವರದಿ ಸಲ್ಲಿಸುತ್ತೇವೆ. ಪ್ರತ್ಯೇಕ ಪಂಚಾಯಿತಿ, ಸರ್ಕಾರಿ ಸೌಲಭ್ಯ ವಿಸ್ತರಣೆ ಮಾಡೋಣ ಎಂದು ನೀಡಿದ ಭರವಸೆಗಳು ಹುಸಿಯಾಗಿವೆ’ ಎಂದು ಅವರು ಆರೋಪಿಸಿದರು.

‘ಗೋನವಾಟ್ಲ ಕಡದರಗಡ್ಡಿ ಮಧ್ಯ ಕೃಷ್ಣಾ ನದಿಗೆ ಸೇತುವೆ ನಿರ್ಮಿಸುವುದರಿಂದ ಕೇವಲ 2ಕಿ.ಮೀ ಅಂತರದಲ್ಲಿ ಪಂಚಾಯಿತಿ ಕೇಂದ್ರ ಸ್ಥಳ ಗುಂತಗೋಳ ತಲಪುತ್ತೇವೆ. ರಸ್ತೆ ಬಳಸಿ ಸುತ್ತುವರಿದು ಬಂದರೆ 12ಕಿ.ಮೀ. ಆಗುತ್ತದೆ ಪಟ್ಟಣ ಪ್ರದೇಶಗಳಿಗೆ ತೆರಳು 35ಕಿ.ಮೀ ರಸ್ತೆ ಸುತ್ತುಬಳಸಿ ಹೋಗಬೇಕಾಗುತ್ತದೆ. ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸದ ಪ್ರತಿನಿಧಿಗಳಿಗೆ ಮತ ಹಾಕಬಾರದೆಂದು ತೀರ್ಮಾನಿಸಿದ್ದೇವೆ’ ಎಂದು ಹನುಮಗೌಡ ತಿಳಿಸಿದರು.

**

ಈಗಾಗಲೆ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದೇವೆ. ಆದರೂ ಜಿಲ್ಲಾಡಳಿತ ಸ್ಪಂದಿಸದಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ –ಬಾಲನಗೌಡ ಪಾಟೀಲ ದಳಪತಿ, ಕಡದರಗಡ್ಡಿ ಗ್ರಾಮಸ್ಥ.

**

– ಬಿ.ಎ. ನಂದಿಕೋಲಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.