ADVERTISEMENT

ಕುಡಿಯಲು ಶುದ್ಧ ನೀರು ಬಳಕೆಗೆ ಸಲಹೆ

ವಿಶ್ವ ಜಲ ದಿನಾಚರಣೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:07 IST
Last Updated 22 ಮಾರ್ಚ್ 2017, 9:07 IST

ಲಿಂಗಸುಗೂರು: ನೀರಿನ ಸಂರಕ್ಷಣೆ ಮತ್ತು ಮಿತಬಳಕೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಶುದ್ಧ ಕುಡಿಯುವ ನೀರಿನ ಬಳಕೆಗೆ ಜನಾಂದೋಲನ ರೂಪಿಸುವಂತೆ ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಆರ್‌.ಗೌಡೂರು ಸಲಹೆ ನೀಡಿದರು.

ವಿವಿಧ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿ, ಜಲಮೂಲ ಗುರುತಿಸಿ ಪ್ರಯೋಗಾಲಯದಿಂದ ಪರೀಕ್ಷಿಸಿದ ನೀರನ್ನೆ ಬಳಕೆ ಮಾಡಬೇಕು. ಆರ್ಸೆನಿಕ್‌, ಫ್ಲೋರೈಡ್‌ ಅಂಶವಿರುವ ನೀರಿನ ಸೇವನೆಯಿಂದ ರೋಗಗಳು ಹರಡುತ್ತವೆ. ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಮುಂದಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಈಗಾಗಲೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 473 ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅನುಮೋದನೆ ನೀಡಲಾಗಿದೆ. ಆ ಪೈಕಿ 418 ಘಟಕ ಸ್ಥಾಪನೆ ಮಾಡಲಾಗಿದೆ. 325 ಘಟಕ ಕಾರ್ಯಾರಂಭ ಮಾಡಿವೆ. ಲಿಂಗಸುಗೂರ ತಾಲ್ಲೂಕಿನಲ್ಲಿ 106 ಘಟಕಗಳಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೆ 78 ಘಟಕ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಜಿಲ್ಲಾ ಸಂಯೋಜಕ ಅಫ್ರೋಜ್‌ಪಾಷ ಮಾತನಾಡಿ, ರಾಸಾಯನಿಕ ಅಂಶವುಳ್ಳ ನೀರು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಗ್ರಾಮೀಣ ಜನತೆಗೆ ಮಾಹಿತಿ ನೀಡಬೇಕು. ಶುದ್ಧ ಕುಡಿಯುವ ನೀರು ಬಳಕೆಯಿಂದ ಆಗುವ ಪ್ರಯೋಜನದ ಮಾಹಿತಿ ನೀಡಿ ಜನರ ಆರೋಗ್ಯ ರಕ್ಷಣೆಗೆ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಉದ್ಘಾಟಿಸಿದರು. ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಅಮರೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ, ಆರೋಗ್ಯ ಇಲಾಖೆ ಅಧಿಕಾರಿ ಎಂ.ಆರ್‌.ಹಂಚಿನಾಳ, ಡಾ. ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.