ADVERTISEMENT

‘ಕೃಷ್ಣಮೂರ್ತಿ ಬಂಧನ ಬೇಡ’

ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ ದಾಖಲಿಸಿರುವ ದೂರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 9:51 IST
Last Updated 10 ಜನವರಿ 2017, 9:51 IST
ಬೆಂಗಳೂರು: ‘ವಿಧಾನ ಪರಿಷತ್‌ ಸದಸ್ಯ ಉಗ್ರಪ್ಪ ಅವರಿಗೆ ಫೇಸ್‌ಬುಕ್‌ನಲ್ಲಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಲಂಡನ್‌ ನಿವಾಸಿ ಕೃಷ್ಣಮೂರ್ತಿ ಮುಗಲೋಡಿ ಅವರನ್ನು ಬಂಧಿಸಬಾರದು’ ಎಂದು ಪೊಲೀಸರಿಗೆ ಹೈಕೋರ್ಟ್‌ ತಾಕೀತು ಮಾಡಿದೆ.
 
ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.
 
ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ಅರ್ಜಿದಾರರ ವಿರುದ್ಧದ ಆರೋಪಗಳು ದುರುದ್ದೇಶಪೂರ್ವಕವಾಗಿವೆ. ಸೂಕ್ತ ಸಾಕ್ಷ್ಯಾಧಾರ ಇಲ್ಲ’ ಎಂದು ಹೇಳಿದರು.
 
‘ವಿದೇಶದಲ್ಲಿ ನೆಲೆಸಿರುವ ಭಾರತೀಯರ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅನ್ವಯ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವುದು  ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಯಾವುದೇ ಪೂರ್ವಾನುಮತಿ ಪಡೆಯದೆ  ತನಿಖೆಗೆ ಹಾಜರಾಗುವಂತೆ ನಮ್ಮ ಕಕ್ಷಿದಾರರಿಗೆ ಸೂಚಿಸಿದ್ದಾರೆ. ಇದು ಕಾನೂನು ಬಾಹಿರ. ಆದ್ದರಿಂದ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿದರು.
 
ಇದನ್ನು ಮಾನ್ಯ ಮಾಡಿದ ಪೀಠವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್‌ ವಕಾಲತ್ತು ವಹಿಸಿದ್ದಾರೆ.
 
ಪ್ರಕರಣವೇನು?: ‘ಸ್ವಚ್ಛಬ್ರಾಹ್ಮಣ’ ವೇದಿಕೆ ಹೆಸರಿನಲ್ಲಿರುವ ಫೇಸ್‌ಬುಕ್‌ ಗ್ರೂಪ್‌ನಲ್ಲಿ ನನಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಕಳೆದ ತಿಂಗಳ 22ರಂದು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಕೃಷ್ಣಮೂರ್ತಿ ಮುಗಲೋಡಿ ವಿರುದ್ಧ ದೂರು ನೀಡಿದ್ದರು. ಇದರನ್ವಯ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.
 
ಅತ್ಯಾಚಾರ ಆರೋಪ  ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳನ್ನು ಪದಚ್ಯುತಗೊಳಿಸಿ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಉಗ್ರಪ್ಪ ಸರ್ಕಾರಕ್ಕೆ ಆಗ್ರಹಿಸಿದ್ದರು. 
 
ಇದನ್ನು ವಿರೋಧಿಸಿ ‘ಸ್ವಚ್ಛಬ್ರಾಹ್ಮಣ’ ವೇದಿಕೆಯು ಸಾಮಾಜಿಕ ಜಾಲತಾಣದಲ್ಲಿ ಉಗ್ರಪ್ಪ ವಿರುದ್ಧ ಅಭಿಯಾನವನ್ನೇ ನಡೆಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.