ADVERTISEMENT

‘ಕೃಷ್ಣೆ ಹರಿದರೂ ನೀರಿಗೆ ಹಾಹಾಕಾರ ತಪ್ಪಿಲ್ಲ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:25 IST
Last Updated 21 ಏಪ್ರಿಲ್ 2017, 6:25 IST
ದೇವದುರ್ಗ ಪಟ್ಟಣದ ಶಂಭುಲಿಂಗೇಶ್ವರ ಬೆಟ್ಟದಲ್ಲಿ ನಿರ್ಮಿಸಲಾಗಿರುವ  ನೀರಿನ ಟ್ಯಾಂಕ್‌ (ಎಡಚಿತ್ರ). ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಲಾಗುತ್ತಿದೆ
ದೇವದುರ್ಗ ಪಟ್ಟಣದ ಶಂಭುಲಿಂಗೇಶ್ವರ ಬೆಟ್ಟದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್‌ (ಎಡಚಿತ್ರ). ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಲಾಗುತ್ತಿದೆ   

ದೇವದುರ್ಗ: ಪಟ್ಟಣಕ್ಕೆ ನೀರು ಪೂರೈಸುವ ಶಾಶ್ವತ ಕುಡಿಯುವ ನೀರಿನ ಬೃಹತ್‌ ಯೋಜನೆ  ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪುರಸಭೆಯ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹೂವಿನಹೆಡ್ಗಿ ಗ್ರಾಮದ ಕೃಷ್ಣಾ ನದಿಯಿಂದ ಈಗ ಪಟ್ಟಣಕ್ಕೆ  ಸರಬರಾಜು ಮಾಡಲಾಗುತ್ತಿರುವ ನೀರು  ಸಾಲುತ್ತಿಲ್ಲ.  ಶಾಸಕ ಕೆ. ಶಿವನಗೌಡ ನಾಯಕ ಅವರು ಸಚಿವರಾಗಿದ್ದಾಗ ಪಟ್ಟಣಕ್ಕೆ ಗೂಗಲ್‌ ಗ್ರಾಮದ ಬ್ರಿಜ್‌ ಕಂ ಬ್ಯಾರೇಜ್‌ನಿಂದ ನೀರು ಪೂರೈಸಲು ಬೃಹತ್ ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು.

ಗೂಗಲ್‌ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ನಿರ್ಮಿಸಿರುವ ಬ್ರಿಜ್‌ ಕಂ ಬ್ಯಾರೇಜ್‌ನಲ್ಲಿ ವರ್ಷದ ಎಲ್ಲ ತಿಂಗಳು ನೀರಿರುತ್ತದೆ. ಈ ನೀರನ್ನು ಪಟ್ಟಣದ ಶಂಭುಲಿಂಗೇಶ್ವರ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಸಂಗ್ರಹಿಸಲು ನೀರು ಸಂಗ್ರಹ ಕೇಂದ್ರ ನಿರ್ಮಿಸುವ ಯೋಜನೆ ಇದಾಗಿದ್ದು, ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಲಾಗಿತ್ತು.

ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಗುತ್ತಿಗೆ ಪಡೆದ ಏಜೆನ್ಸಿ ಟೆಂಡರ್ ಪ್ರಕಾರ ಕಾಮಗಾರಿಯನ್ನು ಮುಗಿಸಿಲ್ಲ. ₹ 52 ಕೋಟಿ ವೆಚ್ಚದ ಯೋಜನೆ ಇದಾಗಿದೆ. ನದಿಯಿಂದ ಪಟ್ಟಣದವರೆಗೆ  ಪೈಪ್‌ಲೈನ್‌ ಮಾಡು ವುದು ಸೇರಿದಂತೆ ನದಿಯಲ್ಲಿ ಪಂಪ್‌ ಹೌಸ್‌, ನೀರು ಸಂಗ್ರಹ ಕೇಂದ್ರ ನಿರ್ಮಾಣದಲ್ಲಿ ವಿಳಂಬವಾದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ADVERTISEMENT

ದೊಡ್ಡಿ, ತಾಂಡಾಗಳು ವಂಚಿತ:ಕೆ.ಇರಬಗೇರಾ ಮತ್ತು ಕರಿಗುಡ್ಡ ಗ್ರಾಮ ಪಂಚಾಯಿತಿಗೆ ಸೇರಿದ್ದ ಸುಮಾರು 20ಕ್ಕೂ ಹೆಚ್ಚು ದೊಡ್ಡಿ ಮತ್ತು ತಾಂಡಾ ಗಳನ್ನು ಕಳೆದ 10 ವರ್ಷಗಳ ಹಿಂದೆಯೇ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಬೃಹತ್‌ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದ್ದರೂ ಅದರ ವ್ಯಾಪ್ತಿಗೆ ದೊಡ್ಡಿ ಮತ್ತು ತಾಂಡಾಗಳನ್ನು ಕೈಬಿಟ್ಟಿ ರುವುದರಿಂದ ಅಲ್ಲಿನ ಜನರು ಯೋಜನೆ ಯಿಂದ ವಂಚಿತರಾಗಿದ್ದಾರೆ.

‘ಈವರೆಗೆ ₹40 ಕೋಟಿ ವೆಚ್ಚದ ಕಾಮಗಾರಿ ನಡೆದಿದೆ. ಈಚೆಗೆ ಕೃಷ್ಣಾ ನದಿಯಿಂದ ಪಟ್ಟಣದವರೆಗಿನ 28 ಕಿ.ಮೀ ಪೈಪ್‌ಲೈನ್‌ನಲ್ಲಿ ನೀರು ಬಿಟ್ಟು ನೋಡಲಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸೇರಿದಂತೆ  ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇವೆ. ಮುಂದಿನ ತಿಂಗಳ ಒಳಗೆ  ಕಾಮಗಾರಿ ಪೂರ್ಣಗೊ ಳ್ಳಲಿದೆ’ ಎಂದು ನಗರ ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಚಂದ್ರಕಾಂತ ಚವ್ಹಾಣ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.