ADVERTISEMENT

ಕೆಲಸ ಸ್ಥಗಿತಗೊಳಿಸಿದ ‘ವಾಟರ್‌ ಮಿಸ್ಟ್‌’

ರಾಯಚೂರು ರೈಲು ನಿಲ್ದಾಣದಲ್ಲಿ ಬಾಧಿಸುತ್ತಿರುವ ಬೇಸಿಗೆ ಬಿಸಿಲು

ನಾಗರಾಜ ಚಿನಗುಂಡಿ
Published 22 ಏಪ್ರಿಲ್ 2017, 5:02 IST
Last Updated 22 ಏಪ್ರಿಲ್ 2017, 5:02 IST
ಕೆಲಸ ಸ್ಥಗಿತಗೊಳಿಸಿದ ‘ವಾಟರ್‌ ಮಿಸ್ಟ್‌’
ಕೆಲಸ ಸ್ಥಗಿತಗೊಳಿಸಿದ ‘ವಾಟರ್‌ ಮಿಸ್ಟ್‌’   
ರಾಯಚೂರು: ಬೇಸಿಗೆಯಲ್ಲಿ ವಾತಾ ವರಣ ತಂಪುಗೊಳಿಸಲು ರಾಯಚೂರು ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ವಾಟರ್‌ ಮಿಸ್ಟ್‌ (ನೀರು ಸಿಂಪಡಣೆ) ಕಾರ್ಯ ಸ್ಥಗಿತಗೊಳಿಸಿ ಎರಡು ವರ್ಷಗ ಳಾದರೂ ದುರಸ್ತಿಗೆ ಮುತುವರ್ಜಿ ವಹಿಸುತ್ತಿಲ್ಲ.
 
ವಾಟರ್‌ ಮಿಸ್ಟ್‌ ಕಾರ್ಯ ನಿರ್ವಹಿಸಲು ನೀರು ತಂಪುಗೊಳಿಸುವ ಯಂತ್ರ ಹಾಗೂ ಕಾಂಪ್ರೆಸರ್‌ ಯಂತ್ರ ವನ್ನು ನಿಲ್ದಾಣದ ಒಂದು ಕೋಣೆಯಲ್ಲಿ ಇರಿಸಲಾಗಿದೆ. ಸೂಕ್ತ ತಂತ್ರಜ್ಞರ ನೆರವಿನಿಂದ ಯಂತ್ರವನ್ನು ದುರಸ್ತಿ ಗೊಳಿಸದ ಕಾರಣ  ಅವು ತುಕ್ಕು ಹಿಡಿಯುವ ಹಂತದಲ್ಲಿವೆ.
 
ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರೋಪಕರಣಗಳು ಹಾಳಾಗುತ್ತಿವೆ. ಬೇಸಿಗೆಯಲ್ಲಿ ಪ್ರಯಾಣಿಕರ ಬಾಧೆ ನಿವಾರಿಸಲು ರೈಲ್ವೆ ಇಲಾಖೆಯು ಮಾಡಿದ್ದ ಯೋಜನೆ ಸಫಲವಾಗುತ್ತಿಲ್ಲ. ಯೋಜನೆಯ ಅನುಕೂಲವನ್ನು ಜನರಿಗೆ ಕಲ್ಪಿಸುವ ಬಗ್ಗೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ.
 
ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ ಒಂದರಲ್ಲಿ ಮಾತ್ರ ನೀರು ಸಿಂಪಡಣೆ ವ್ಯವಸ್ಥೆ ಇದೆ. ಇದಕ್ಕಾಗಿ ಲೋಹದ ಮೇಲ್ಚಾವಣಿಯ ಎರಡೂ ಕಡೆಗಳಲ್ಲಿ ಕಿರಿದಾದ ಕೊಳವೆಗಳನ್ನು ನಿಲ್ದಾಣದುದ್ದಕ್ಕೂ ಅಳವಡಿಸಲಾಗಿದೆ.
 
ಶಾಶ್ವತ ಪರಿಹಾರವಾಗುವಂತೆ ಲೋಹದ ಕೊಳವೆಗಳನ್ನು ಜೋಡಿಸಿದ್ದರೂ ವರ್ಷಾನುಗಟ್ಟಲೆ ಅವನ್ನು ಬಳಸದ ಕಾರಣ  ಕೊಳೆಯಾಗಿವೆ. ನೀರು ಸಿಂಪಡಣೆಯ ವಾಲ್ವ್‌ಗಳು ದೂಳಿನಿಂದ ಅವೃತ್ತವಾಗಿವೆ. ನಿಲ್ದಾಣದ ಮೇಲ್ಚಾವಣೆ ಲೋಹದ್ದಾಗಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಕಾಯುತ್ತವೆ.
 
ನಿಲ್ದಾಣದಲ್ಲಿ ಪ್ರಯಾಣಿಕರು ಅರ್ಧ ಗಂಟೆ ಕಳೆಯುವುದರೊಳಗೆ ಬಾಯಾರಿಕೆ ಶುರುವಾಗುತ್ತದೆ. ಬಯಲಿನ ಬಿಸಿಲಿಗಿಂತಲೂ ನಿಲ್ದಾಣದೊಳಗೆ ನಿಂತಾಗ ಬಿಸಿಲು ಹೆಚ್ಚು ಬಾಧಿಸುತ್ತದೆ.
 
ಸ್ಟೇಷನ್‌ ಮ್ಯಾನೇಜರ್‌ ಎಂ.ವಿವೇಕಾನಂದ ಅವರು ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಅತ್ಯಾಧುನಿಕ ತಂತ್ರಜ್ಞಾನದ ವಾಟರ್‌ ಮಿಸ್ಟ್‌ ಹಾಕಿದ್ದಾರೆ. ಅದು ಸ್ಥಗಿತವಾದ ಬಳಿಕ ದುರಸ್ತಿಗಾಗಿ ಪ್ರಯತ್ನ ಮಾಡಲಾಗಿದೆ. ರಾಯಚೂರಿನಲ್ಲಿ ಸೂಕ್ತ ತಂತ್ರಜ್ಞರು ಸಿಗುತ್ತಿಲ್ಲ.
 
ಹಾಗಾಗಿ ಅದರ  ಪ್ರಯೋಜನ ಆಗುತ್ತಿಲ್ಲ. ಹೈದರಾಬಾದ್‌ನಲ್ಲಿ ಇದರ ತಂತ್ರಜ್ಞಾನ ತಿಳಿದಿರುವ ದುರಸ್ತಿದಾರರು ಇದ್ದಾರೆ ಎಂದು ಗೊತ್ತಾಗಿದೆ.  ಮುಂದಿನ ದಿನಗಳಲ್ಲಿ ಅವರನ್ನು ಕರೆಸಿ  ದುರಸ್ತಿ ಮಾಡಿಸುತ್ತೇವೆ’ ಎಂದರು.
 
ಹೀಗಿತ್ತು ವಾಟರ್‌ ಮಿಸ್ಟ್‌: ನಿಲ್ದಾಣದ ಮೇಲ್ಚಾವಣಿಗೆ ಎರಡೂ ಕಡೆಗಳಲ್ಲಿ ಕಿರಿದಾದ ಕೊಳವೆಗಳನ್ನು ಅಳವಡಿಸಲಾಗಿದೆ. ಈ ಕೊಳವೆಗೆ ಅಲ್ಲಲ್ಲಿ ನೀರು ಸಿಂಪರಿಸಲು ವಾಲ್ವ್‌ಗಳನ್ನು ಬಿಡಲಾಗಿದೆ. ಈ ವಾಲ್ವ್‌ ಮೂಲಕ ನೀರು ಹೊಗೆಯಂತೆ ಚಿಮ್ಮಿಕೊಂಡು ಇಡೀ ನಿಲ್ದಾಣವನ್ನು ತಂಪು ಗೊಳಿಸುತ್ತಿತ್ತು.
 
ಹವಾ ನಿಯಂತ್ರಿತ ಕೋಣೆಗಿಂತಲೂ ಹಿತವಾದ ಅನುಭವವನ್ನು ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಪಡೆಯುತ್ತಿದ್ದರು. ಬಿಸಿಲಿನಲ್ಲಿ ಬಸವಳಿದ ಜನರು ರೈಲಿನಲ್ಲಿ ಸಂಚರಿಸಲು ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಂತೆ ದಣಿವು ಮಾಯವಾಗುತ್ತಿತ್ತು. 
 
‘ಬೇಸಿಗೆಯಲ್ಲಿ ರಾಯಚೂರು ರೈಲು ನಿಲ್ದಾಣ ಬಹಳ ಖುಷಿ ಕೊಡುತ್ತಿತ್ತು. ರೈಲುಗಳು ಬರುವುದು ವಿಳಂಬವಾದರೂ ಜನರು ಬೇಸರ ಪಟ್ಟುಕೊಳ್ಳದೆ ನಿಂತುಕೊಳ್ಳುತ್ತಿದ್ದರು.
 
ಈಗ ನಿಲ್ದಾಣದಲ್ಲಿ ಗಬ್ಬು ವಾಸನೆಯೂ ಹೆಚ್ಚಾಗಿದೆ. ನೀರು ಸಿಂಪಡಣೆಯನ್ನೂ ಆರಂಭಿಸಿಲ್ಲ. ಹೀಗಾಗಿ ರೈಲು ತಡವಾಗಿ ಬರುತ್ತದೆ ಎಂದು ಗೊತ್ತಾದರೆ, ಜನರು ನಿಲ್ದಾಣದ ಹೊರಗೆ ಕಾದು ನಿಲ್ಲುತ್ತಿದ್ದಾರೆ. ಪ್ರಯಾಣಿಕರಿಗೆ ಅನುಕೂಲವಾಗಲು ರೈಲ್ವೆ ಇಲಾಖೆಯಿಂದ ಈ ರೀತಿ ವ್ಯವಸ್ಥೆ ಮಾಡಿದ್ದರು. ಈಗ ಅವರೇ ಸ್ಥಗಿತಗೊಳಿಸಿದ್ದಾರೆ.

ನಿಲ್ದಾಣದಲ್ಲಿ ಯಾವ ಅಧಿಕಾರಿಯನ್ನು ಕೇಳಬೇಕು ಗೊತ್ತಿಲ್ಲ. ಕನಿಷ್ಠಪಕ್ಷ ಬೇಸಿಗೆಯಲ್ಲಿ ನೀರು ಸಿಂಪಡಣೆ ಆರಂಭಿಸಿದರೆ ತುಂಬಾ ಅನುಕೂಲವಾಗುತ್ತದೆ’ ಎಂದು ರಾಯಚೂರಿನಿಂದ ಯಾದಗಿರಿಗೆ ಹೊರಟಿದ್ದ ನಿವೃತ್ತ ಶಿಕ್ಷಕ ಮಲ್ಲಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
****
ಗುಡ್ಡದ ಬಿಸಿ
ಅಧಿಕ ಪ್ರಮಾಣದ ಬಿಸಿಲು ಹಾಗೂ ಕಲ್ಲಿನ ಗುಡ್ಡಗಳಿಂದ ಆವೃತವಾದ ರಾಯಚೂರು ಮತ್ತು ಯಾದಗಿರಿ ರೈಲು ನಿಲ್ದಾಣಗಳಲ್ಲಿ ಮಾತ್ರ 2013 ರಲ್ಲಿ ವಾಟರ್‌ ಮಿಸ್ಟ್‌ ಅಳವಡಿಸ ಲಾಗಿತ್ತು. ಆರಂಭದ ಒಂದೆರಡು ವರ್ಷ ಸರಿಯಾಗಿ ಕಾರ್ಯ ನಿರ್ವಹಿಸಿದವು.  ಇದ್ದಕ್ಕಿದ್ದಂತೆ ರಾಯಚೂರಿನ ಯಂತ್ರ ಕೆಲಸ ನಿಲ್ಲಿಸಿದೆ. ಯಾದಗಿರಿಯಲ್ಲಿ ಮಾತ್ರ ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.