ADVERTISEMENT

ಕ್ರಿಯಾ ಯೋಜನೆಗೆ ಅನುಮೋದನೆ

ಸಚಿವ ತನ್ವೀರ್‌ ಸೇಠ್‌ ಅಧ್ಯಕ್ಷತೆಯಲ್ಲಿ ನಗರೋತ್ಥಾನ ಜಿಲ್ಲಾ ಮಟ್ಟದ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 7:27 IST
Last Updated 28 ಜನವರಿ 2017, 7:27 IST
ಕ್ರಿಯಾ ಯೋಜನೆಗೆ ಅನುಮೋದನೆ
ಕ್ರಿಯಾ ಯೋಜನೆಗೆ ಅನುಮೋದನೆ   

ರಾಯಚೂರು: ಮುಖ್ಯಮಂತ್ರಿ ಅವರ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದ 3ನೇ ಹಂತದ ನಗರೋತ್ಥಾನ ಯೋಜನೆಯಡಿ ಜಿಲ್ಲೆಯ 11 ಸ್ಥಳೀಯ ಸಂಸ್ಥೆಗಳಲ್ಲಿ ದೇವದುರ್ಗ ಹೊರತು ಪಡಿಸಿ 10 ಸ್ಥಳೀಯ ಸಂಸ್ಥೆಗಳು ಸಲ್ಲಿಸಿದ ಕ್ರಿಯಾ ಯೋಜನೆಗಳಿಗೆ ನಗರೋತ್ಥಾನ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ತಿದ್ದುಪಡಿಯೊಂದಿಗೆ ನಿಯಮಾನುಸಾರ ಅನುಮೋದನೆಗೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಗರೋತ್ಥಾನದ ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್‌ ಸೇಠ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ
ನಡೆದ ಸಭೆಯಲ್ಲಿ, ಕ್ರಿಯಾ ಯೋಜನೆ ಮಂಡಿಸಿ ಅನುಮೋದನೆ ಪಡೆಯಲಾಯಿತು.

ನಗರಾಭಿವೃದ್ಧಿ ಕೋಶದ ಅಧಿಕಾರಿ ಬಿರಾದಾರ ಅವರು ಮಾತನಾಡಿ, ನಗರೋತ್ಥಾನ ಯೋಜನೆಯ 3ನೇ ಹಂತದಲ್ಲಿ ಜಿಲ್ಲೆಗೆ ₹120 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೇ15ರಷ್ಟು ಮೊತ್ತವನ್ನು ಕಾಯ್ದಿರಿಸಿ­ಕೊಂಡು ಶೇ 85ರಷ್ಟು ಮೊತ್ತಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಯೋಜನೆಗಳನ್ನು ಪ್ರಥಮ ಆದ್ಯತೆಯಲ್ಲಿ ಅನುಷ್ಠಾನಗೊಳಿಸಲು ಅನುದಾನ ಕಾಯ್ದಿರಿಸಬೇಕು. ಉಳಿದ ಹಣದಲ್ಲಿ ಶೇ 70ರಷ್ಟು ಹಣವನ್ನು ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಸಂಚಾರ ನಿಯಂತ್ರಣ ಹಾಗೂ ಸಿಸಿ ರಸ್ತೆಯಲ್ಲಿ ಕಾರಿಡಾರ್‌ ನಿರ್ಮಿಸಲು, ಶೇ 10ರಷ್ಟು ಮೊತ್ತಕ್ಕೆ ಮಳೆ ನೀರು ಚರಂಡಿ ಕಾಮಗಾರಿ ಹಾಗೂ ಶೇ 20ರಷ್ಟು ಮೊತ್ತದಲ್ಲಿ ಕಚೇರಿ ಕಟ್ಟಡ, ಸಮುದಾಯ, ಸಾರ್ವಜನಿಕ ಶೌಚಾ­ಲಯ, ಆಧುನಿಕ ಬಸ್‌ ನಿಲ್ದಾಣ ಹಾಗೂ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಬಳಕೆ ಆಗುವಂತೆ ಕ್ರಿಯಾ ಯೋಜನೆ ತಯಾರಿಸಿದರೆ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದರು.

ಶಾಸಕರು ಮಾತನಾಡಿ, ನಿಯಮಾ­ನು­ಸಾರ ಕಾಮಗಾರಿ ಕೈಗೊಳ್ಳಲು ತೊಂದರೆ ಆದಾಗ ಕಾಮಗಾರಿ ಬದಲಾಯಿಸಲು ಮತ್ತು ಅಗತ್ಯ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಕ್ರಿಯಾ ಯೋಜನೆಗಳಿಗೆ ಬೆಂಗಳೂರಿನಲ್ಲಿ ತ್ವರಿತಗತಿಯಲ್ಲಿ ಅನು­ಮೋದನೆ ಕೊಡಿಸಲು ಸಚಿವರು ಜವಾ­ಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ನಿರಂತರ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿರುವುದ­ರಿಂದ ಅದಕ್ಕೆ ವಂತಿಕೆ ಹಣ ನೀಡಬೇಕಾಗಿದೆ. ಅದರ ಬದಲಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅವಕಾಶ ನಿಡಬೇಕು ಎಂದು ಅವರು ಹೇಳಿದರು. ದೇವದುರ್ಗ ಪುರಸಭೆಯ ಕ್ರಿಯಾ ಯೋಜನೆಯನ್ನು ಒಂದು ವಾರದೊಳಗೆ ಸಲ್ಲಿಸಲು ಸಚಿವರು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.