ADVERTISEMENT

ಗ್ರಾಕೂಸ್‌ನಿಂದ ಜೈಲ್‌ಭರೋ ಚಳವಳಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 6:15 IST
Last Updated 5 ಮಾರ್ಚ್ 2015, 6:15 IST

ರಾಯಚೂರು: ಮಾಸಿಕ ಪಿಂಚಣಿ ₹ 2 ಸಾವಿರಕ್ಕೆ ಹೆಚ್ಚಿಸಬೇಕು ಮತ್ತು ನ್ಯಾಯಬೆಲೆ ಅಂಗಡಿಯಲ್ಲಿ ಜೋಳ, ಬೇಳೆಯನ್ನು ತಕ್ಷಣದಿಂದಲೇ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಜೈಲ್‌ಭರೋ ಚಳುವಳಿ ನಡೆಸಿದ ಸುಮಾರು ನಾಲ್ಕು ಸಾವಿರ ಜನರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಟಿಪ್ಪುಸುಲ್ತಾನ್‌ ಉದ್ಯಾನ­ದಿಂದ ಡಾ.ಬಿ.­ಆರ್‌.­ಅಂಬೇಡ್ಕರ ವೃತ್ತದವರೆಗೆ  ಪ್ರತಿಭ­ಟನಾ ರ್‍ಯಾಲಿ ನಡೆಸಿದರು. ನಂತರ ಜೈಲ್‌ಭರೋ ಚಳವಳಿಗೆ ಮುಂದಾ­ದಾಗ ಪೊಲೀಸರು ಜಿಲ್ಲಾ ಕ್ರೀಡಾಂ­ಗಣದಲ್ಲಿ ಪ್ರತಿಭಟ­ನಾಕಾರರನ್ನು ಬಂಧಿಸಿ ,ಬಿಡುಗಡೆ ಮಾಡಿದರು.

ಸರ್ಕಾರವು ನಮ್ಮ ಶಾಸಕರಿಗೆ ಒಂದು ದಿನಕ್ಕೆ ₹ 800 ವೆಚ್ಚ ಮಾಡು­ತ್ತದೆ. ಅಧಿಕಾರಿಗಳಿಗೆ ₹ 500, ಕೈದಿಗಳಿಗೆ ₹ 100 ವೆಚ್ಚ ಮಾಡುತ್ತದೆ. ಆದರೆ, ರೈತ, ಕೂಲಿ ಕಾರ್ಮಿಕರಿಗೆ ದಿನಕ್ಕೆ ಕೇವಲ ₹ 17 ವೆಚ್ಚ ಮಾಡು­ತ್ತಿದೆ ಎಂದು ದೂರಿದರು. ಶೇ.6 ರಷ್ಟು ಸಂಘಟಿತ ಕಾರ್ಮಿಕರಿಗೆ (ಸರ್ಕಾರಿ ನೌಕರರು ಮತ್ತು ಇತರೆ)  ಮಾತ್ರ ಗೌರವದಿಂದ ಬದುಕುವ ಹಕ್ಕು ನೀಡಿರುವ ಸರ್ಕಾರ ಉಳಿದ ಶೇ.94 ರಷ್ಟು ಜನರಿಗೆ ಗೌರವದ ಬದುಕು ಕಲ್ಪಿಸುವ ಜವಾ­ಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.

ಸಂವಿಧಾನ ಬದ್ದವಾಗಿ ದೊರೆಯ­ಬೇಕಾದ ಗೌರವಯುತ ಜೀವನದ ಹಕ್ಕು ನೀಡಲು ಕೂಡಲೇ ಸರ್ಕಾರವು ವಯಸ್ಕರು, ವಿಧವೆಯರು, ಅಂಗವಿ­ಕಲರು ಮತ್ತು ದೇವದಾಸಿಯರಿಗೆ ಪಿಂಚಿಣಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಮುಖಂಡ ಅಭಯ್‌­ಕುಮಾರ, ಶರಣೇಗೌಡ, ವಿದ್ಯಾ ಪಾಟೀಲ, ಮೋಕ್ಷಮ್ಮ, ಗುರುರಾಜ  ನೇತೃತ್ವವಹಿಸಿದ್ದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಟಿಪ್ಪು ಸುಲ್ತಾನ್ ಉದ್ಯಾನವದಲ್ಲಿ ಪ್ರತಿಭಟನೆಕಾರರು ಸಮಾವೇಶಗೊಂಡರು. ಅಂಗವಿ­ಕಲರು, ವೃದ್ಧರು, ವಿಧವೆ­ಯರು ಹೀಗೆ ಪಿಂಚಣಿ ಅವಲಂಬಿಸಿದ ಜನ ತಮ್ಮ ಅಸಮಾಧಾನ ತೋಡಿಕೊಂಡರು. ಒಂದು ತಿಂಗಳು ಬಂದರೆ 9 ತಿಂಗಳು ಬರುವುದಿಲ್ಲ.  ಕನಿಷ್ಠ ಪಿಂಚಣಿ ಜೀವನ ನಿರ್ವಹಣೆಗೂ ಸಾಲುವುದಿಲ್ಲ. ಯಾವಾಗೋ ಒಮ್ಮೆ ಬರುವ ಪಿಂಚಣಿ ಮೊತ್ತ ನಂಬಿ ಬದುಕುವುದು ಕಷ್ಟ ಎಂದು ನೋವು ತೋಡಿಕೊಂಡರು.

ನಮಗೆ ಸಹಾಯ ಮಾಡಲು ಸರ್ಕಾರ ಪಿಂಚಣಿ ಕಲ್ಪಿಸಿದೆ. ಆದರೆ, ಕನಿಷ್ಠ ಜೀವನ ನಿರ್ವಹಣೆ­ಗಾಗು­ವಷ್ಟಾದರೂ, ನಿಯಮಿತ­ವಾಗಿ ಕೊಡ­ಬೇಕು, ಪಿಂಚಣಿಗಾಗಿ ಅಲೆಯುವುದು ತಪ್ಪಿಸಬೇಕು ಎಂದು ಪುರತಿಪ್ಲಿ ಗ್ರಾಮದ ನಿಂಗಮ್ಮ ಪಿಂಚಣಿದಾರರ ಸಮಸ್ಯೆ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.