ADVERTISEMENT

ಚಳಿಗಾಲದಲ್ಲೆ ಹೆಚ್ಚಿದ ನೀರಿನ ಸಮಸ್ಯೆ

ಬರಿದಾದ ಗಣೇಶಕಲ್‌, ರಾಂಪುರ ಸಮತೋಲನ ಜಲಾಶಯ: ನಿತ್ಯ ತಪ್ಪದ ಪರದಾಟ

ಶಶಿಧರ ಗರ್ಗಶ್ವೇರಿ
Published 2 ಜನವರಿ 2017, 9:42 IST
Last Updated 2 ಜನವರಿ 2017, 9:42 IST

ರಾಯಚೂರು: ‘ಒಂದು ತಿಂಗಳಿಂದ ಇದೇ ಗೋಳು. ನೀರು ಸರಿಯಾಗಿ ಬರುವುದಿಲ್ಲ. ನಾಲ್ಕೈದು ದಿನಗಳಿಗೆ ಒಮ್ಮೆ ಬರುತ್ತದೆ. ಅದು ಯಾವ ಸಮಯದಲ್ಲಿ ಬರುತ್ತದೋ ಗೊತ್ತಿಲ್ಲ. ನಲ್ಲಿಯಲ್ಲಿ ಶಬ್ದವಾಗುವುದನ್ನೆ ಕಾಯುತ್ತಿರಬೇಕು’ ಎಂಬ ದೇವಿನಗರದ ನಿವಾಸಿ ಭಾಗ್ಯಮ್ಮ ಅವರ ಈ ಆಕ್ರೋಶ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಕ್ಕೆ ಕನ್ನಡಿ ಹಿಡಿಯುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ನಗರದಲ್ಲಿ ಕುಡಿಯವ ನೀರಿನ ಸಮಸ್ಯೆ ಹೆಚ್ಚಿದೆ. ನಾಲ್ಕು ದಿನಗಳಿಗೆ ಒಮ್ಮೆ ನೀರು ಬಿಡಲಾಗುತ್ತಿದೆ. ದೇವದುರ್ಗ ತಾಲ್ಲೂಕಿನಲ್ಲಿರುವ ಗಣೇಕಲ್‌ ಸಮತೋಲನ ಜಲಾಶಯ (ಬಂಗಾರಪ್ಪ ಕೆರೆ) ಮತ್ತು ಕೃಷ್ಣಾ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ನಗರದ 35 ವಾರ್ಡ್‌ಗಳಿಗೆ ನೀರು ಸರಬರಾಜು ಆಗುತ್ತದೆ.

ಗಣೇಕಲ್‌ ಸಮತೋಲನ ಜಲಾಶಯಕ್ಕೆ ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ನೀರು ಹರಿಯುತ್ತದೆ. ಇದನ್ನು ಉಪಕಾಲುವೆ ಮೂಲಕ ರಾಯಚೂರು ಹೊರವಲಯದಲ್ಲಿರುವ ರಾಂಪುರದ ಸಮತೋಲನ ಜಲಾಶಯಕ್ಕೆ ತುಂಬಿಸಿಕೊಂಡು ಅಲ್ಲಿಂದ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ನಗರದ ಶೇ 30ರಷ್ಟು ಕುಡಿಯುವ ನೀರನ್ನು ಪೂರೈಕೆ ಮಾಡುವ ಗಣೇಕಲ್‌ ಜಲಾಶಯ ಈಗ ಬರಿದಾಗಿದೆ. ಇದನ್ನೆ ನಂಬಿಕೊಂಡಿರುವ ರಾಂಪುರ ಜಲಾಶಯವೂ ಖಾಲಿ ಆಗಿದೆ.

ಕುಡಿಯುವ ನೀರು ಸರಬರಾಜಿಗೆ ನೀರು ಕಾಯ್ದಿರಿಸಿಕೊಳ್ಳದೆ ರಾಜಕೀಯ ಮುಖಂಡರ ಪ್ರಭಾವ, ಪ್ರತಿಭಟನೆಯ ಒತ್ತಡದಿಂದ ಜಮೀನಿಗೆ ನೀರು ಹರಿಸಿರುವುದೆ ಇದಕ್ಕೆ ಮುಖ್ಯ ಕಾರಣ ಎಂದು ನಗರಸಭೆ ಆರೋಪಿಸುತ್ತದೆ.

‘ನಗರದ ಒಟ್ಟು 35 ವಾರ್ಡ್‌ಗಳಲ್ಲಿ 8ರಿಂದ 10 ವಾರ್ಡ್‌ಗಳನ್ನು ಬಿಟ್ಟರೆ ಉಳಿದೆಡೆಗಳಿಗೆ ರಾಂಪುರ ಕೆರೆಯಿಂದಲೇ ನೀರು ಪೂರೈಕೆಯಾಗುತ್ತದೆ. ಪ್ರತಿದಿನ 10 ಎಂಎಲ್‌ಡಿ ನೀರು ಪೂರೈಕೆ ಮಾಡಬೇಕಿರುವ ರಾಂಪುರ ಕೆರೆಯಲ್ಲಿ ಈಗ ನೀರಿಲ್ಲ. ಹೀಗಾಗಿ ಕೃಷ್ಣಾ ಎರಡನೇ ಹಂತ ನೀರು ಪೂರೈಕೆಯಿಂದಲೇ ಈಗ 35 ವಾರ್ಡ್‌ಗಳಿಗೂ ಸರಿದೂಗಿಸಿಕೊಂಡು ನೀರು ನೀಡುತ್ತಿದ್ದೇವೆ’ ಎಂದು ನಗರಸಭೆ ಉಪಾಧ್ಯಕ್ಷ ಜಯಣ್ಣ ಹೇಳಿದರು.

‘ಕೃಷ್ಣಾ ಎರಡನೇ ಹಂತದ ಕುಡಿವ ನೀರು ಯೋಜನೆಯಲ್ಲಿ 40 ಎಂಎಲ್‌ಡಿ ನೀರು ದಿನ ದೊರೆಯುತ್ತದೆ. ಇದರಲ್ಲಿ 10 ಎಂಎಲ್‌ಡಿ ನೀರು ಕೈಗಾರಿಕೆಗಳಿಗೆ ನೀಡಬೇಕು.ಶುದ್ಧೀಕರಣ ಘಟಕ ಮತ್ತು ಮಾರ್ಗ ಮಧ್ಯೆಯ ಸೋರಿಕೆ ಕಾರಣ ಸುಮಾರು ಎಂಟು ಎಂಎಲ್‌ಡಿ ನೀರು ಸೋರಿಕೆ ಆಗುತ್ತದೆ. 20ರಿಂದ 22 ಎಂಎಲ್‌ಡಿ ನೀರನ್ನೆ ನಗರದ ಎಲ್ಲಾ ವಾರ್ಡ್‌ಗಳಿಗೂ ಹಂಚಬೇಕಾಗಿದೆ’ ಎಂದರು.

‘ಈಚೆಗೆ ಬರ/ನೆರೆ ಹಾವಳಿಯಿಂದ ಉಂಟಾದ ಹಾನಿಯ ಬಗ್ಗೆ ಅಧ್ಯಯನ ನಡೆಸಲು ಬಂದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಗಣೇಕಲ್‌ ಜಲಾಶಯ ಬರಿದಾಗಿದ್ದನ್ನು ಕಂಡು ಗಾಬರಿಗೊಂಡರು. ಜನವರಿ 5ರಿಂದ ಈ ಜಲಾಶಯಕ್ಕೆ ನೀರು ಬಿಡುವಂತೆ ನಿರ್ಧಾರ ಕೈಗೊಳ್ಳಲು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಐಸಿಸಿ ಸಭೆ ಕರೆಯುವಂತೆ ಸೂಚಿಸುವುದಾಗಿ ಹೇಳಿದ್ದಾರೆ. ಅವರ ಸೂಚನೆಯಂತೆ ಜ. 5ರಿಂದ ನೀರು ಬಿಟ್ಟರೆ ನಗರದ ಪರಿಸ್ಥಿತಿ ಸುಧಾರಿಸುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ’ ಎಂದು ಜಯಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.