ADVERTISEMENT

ಜನವಸತಿ ಪ್ರದೇಶದ ನಿದ್ದೆಗೆಡಿಸಿದ ಕಾಲುವೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 9:10 IST
Last Updated 6 ನವೆಂಬರ್ 2017, 9:10 IST
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಅಪೂರ್ಣ ಸ್ಥಿತಿಯಲ್ಲಿ ಉಳಿದಿರುವ ರಾಜಕಾಲುವೆ ಮಾರ್ಗ
ರಾಯಚೂರಿನ ಡ್ಯಾಡಿ ಕಾಲೊನಿಯಲ್ಲಿ ಅಪೂರ್ಣ ಸ್ಥಿತಿಯಲ್ಲಿ ಉಳಿದಿರುವ ರಾಜಕಾಲುವೆ ಮಾರ್ಗ   

ರಾಯಚೂರು: ನಗರದ ವಾರ್ಡ್‌ ಸಂಖ್ಯೆ 5ರ ವ್ಯಾಪ್ತಿಯ ಡ್ಯಾಡಿ ಕಾಲೊನಿ ಹಾಗೂ ಅದರ ಪಕ್ಕದ ಬಡಾವಣೆ ಜನರು ರಾಜಕಾಲುವೆ ಪೋಷಿತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಡ್ಯಾಡಿ ಕಾಲೊನಿವರೆಗೂ ಮಾತ್ರ ರಾಜ ಕಾಲುವೆ ನಿರ್ಮಿಸಲಾಗಿದ್ದು, ಅಲ್ಲಿಂದ ಮುಂದಕ್ಕೆ ಕೊಳಚೆ ಹರಿದು ಹೋಗುವ ವ್ಯವಸ್ಥೆ ಆಗಿಲ್ಲ.

ಹೀಗಾಗಿ ಕೊಳಚೆ ನೀರು ಹರಡಿಕೊಂಡಿದೆ. ಅದು ಸುತ್ತಲಿನ ಪ್ರದೇಶಕ್ಕೆ ಗಬ್ಬು ವಾಸನೆ ಹೊಮ್ಮಿಸುತ್ತಿದೆ. ಸುಸಜ್ಜಿತವಾಗಿ ಮನೆ ಕಟ್ಟಿಕೊಂಡಿರುವ ಜನರು ಸುತ್ತಮುತ್ತಲಿನ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಅಸಹಾಯಕರಾಗಿದ್ದಾರೆ. ಕೊಳಚೆಗೆ ಹೊಂದಿಕೊಂಡು ಕಸದ ಗಿಡಗಳು ಬೆಳೆದು ಇಡೀ ಪರಿಸರವನ್ನು ಮಲೀನ ಮಾಡಿದ್ದಲ್ಲದೆ, ಸೊಳ್ಳೆ, ಹಂದಿ, ಬೀದಿನಾಯಿಗಳಿಗೆ ವಾಸಿಸಲು ಅನುಕೂಲವಾಗಿವೆ. ಜನರು ಹಗಲಿರುಳು ಮನೆ ಬಾಗಿಲು ಬಂದ್ ಮಾಡಿ ಕೊಂಡಿರಬೇಕಾದ ಅನಿವಾರ್ಯತೆ ಇದೆ.

ಕಾಲೊನಿ ಮಾರ್ಗದ ಮುಖ್ಯರಸ್ತೆ ಮಾತ್ರ ಸಂಚಾರಕ್ಕೆ ಸುಗಮವಾಗಿದೆ. ಮುಖ್ಯರಸ್ತೆಯಿಂದ ಮನೆಗಳಿಗೆ ತಲುಪುವುದು ಸಂಕಷ್ಟಕರ. ಎಲ್ಲಿ ನೋಡಿದರೂ ತಗ್ಗು ಗುಂಡಿಗಳು. ಕೆಲವು ಕಡೆ ಬೈಕ್‌ ಸಂಚಾರಕ್ಕೂ ತಾಪತ್ರಯ. ಕಾರಿನ ಮೂಲಕ ಮನೆ ತಲುಪಲು ಒಳ್ಳೆಯ ರಸ್ತೆ ಎಲ್ಲಿದೆ ಎಂದು ಹುಡುಕಿ ಸುತ್ತುವರೆಗೂ ಹೋಗುವ ಅನಿವಾರ್ಯತೆ ಇದೆ.

ADVERTISEMENT

ಮಳೆಗಾಲದಲ್ಲಿ ಬಡಾವಣೆಯ ಎಲ್ಲ ರಸ್ತೆಗಳು ಕಾಲುವೆ ಮತ್ತು ಕೆರೆಗಳಂತೆ ಗೋಚರಿಸುತ್ತಿದ್ದವು. ಕಚ್ಚಾರಸ್ತೆಗಳ ಅಕ್ಕಪಕ್ಕ ಮುಳ್ಳುಕಂಟಿಗಳು ಬೆಳೆದು ಜನ ಮತ್ತು ವಾಹನಗಳ ಸಂಚಾರ ಮಾರ್ಗಕ್ಕೆ ಚಾಚಿಕೊಂಡಿವೆ. ರಸ್ತೆ ಸಾಕಷ್ಟು ವಿಸ್ತಾರವಾಗಿ ಇದ್ದರೂ ಮುಳ್ಳಿನ ಕಂಟಿಗಳು ಅಡ್ಡಲಾಗಿ ಕಾರುಗಳು ಸಂಚರಿಸಲು ಸಾಧ್ಯವಿಲ್ಲದಂತೆ ಆಗಿದೆ.

ಡ್ಯಾಡಿ ಕಾಲೊನಿಯ ಬಹುತೇಕ ಅಡ್ಡರಸ್ತೆಗಳೆಲ್ಲವೂ ಸಮಸ್ಯೆಗಳಿಂದ ಕೂಡಿವೆ. ಅಲ್ಲಿ ನಿರ್ಮಿಸಿದ ಯಾವ ಚರಂಡಿಗಳಿಗೂ ಪರಸ್ಪರ ಸಂಪರ್ಕ ವ್ಯವಸ್ಥೆ ಮಾಡಿಲ್ಲ. ಇದರಿಂದ ಜನವಸತಿಗಳಿಂದ ಹೊರಬರುವ ತ್ಯಾಜ್ಯ ನೀರು ಚರಂಡಿಯಲ್ಲೆ ನಿಂತು ವಾತಾವರಣ ಹದಗೆಡಿಸಿವೆ.

ರಾಜಕಾಲುವೆ ಸೃಷ್ಟಿಸುತ್ತಿರುವ ಸಮಸ್ಯೆಗಳು ಒಂದುಕಡೆಯಾದರೆ, ಚರಂಡಿಗಳು ಭರ್ತಿಯಾಗಿ ದಿನದಿಂದ ದಿನಕ್ಕೆ ಸಮಸ್ಯೆಯನ್ನು ಉಲ್ಭಣ ಮಾಡುತ್ತಿವೆ. ಶಿವಮಂದಿರ ಮಾರ್ಗ, ಓವರ್‌ ಟ್ಯಾಂಕ್‌ ಮುಂದಿನ ಪ್ರದೇಶ, ಮಸೀದಿ ಹತ್ತಿರ ಎಲ್ಲಿ ನೋಡಿದರೂ ಸೊಳ್ಳೆಗಳ ವಾಸಸ್ಥಾನಗಳು ಕಣ್ಣಿಗೆ ಬೀಳುತ್ತವೆ. ಮಲೀನ ನೀರು ಹರಿದುಹೋಗದೆ ನಿಂತುಕೊಂಡಿದೆ.

‘ಡ್ಯಾಡಿ ಕಾಲೊನಿ ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಬಡಾವಣೆಯಲ್ಲಿ ಸೊಳ್ಳೆಗಳ ಕಾಟ ವಿಪರೀತವಿದೆ. ಸಂಜೆಯ ಮೇಲೆ ಮನೆಯಿಂದ ಹೊರಬರುವುದಕ್ಕೆ ಆಗುವುದಿಲ್ಲ. ಬಾಗಿಲು ತೆರೆದರೆ ಸೊಳ್ಳೆಗಳು ಒಳ ಬರುತ್ತವೆ ಎನ್ನುವ ಆತಂಕವಿದೆ. ಖಾಲಿ ನಿವೇಶನಗಳಲ್ಲಿ ಕೊಳಚೆ ನೀರು ನಿಂತಿದೆ.

ಮಳೆಗಾಲ ಮುಗಿದು ಹೋದರೂ ಇನ್ನೂ ನೀರು ನಿಂತಿದೆ. ಸಮಸ್ಯೆಗಳ ಬಗ್ಗೆ ಯಾರಿಗೆ ಹೇಳಬೇಕು. ನಗರಸಭೆಯವರು ತೆರಿಗೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಮೂಲಸೌಕರ್ಯ ಮಾಡಿಕೊಡುವುದಕ್ಕೆ ಕ್ರಮಕೈಗೊಳ್ಳುವುದಿಲ್ಲ. ವಾರ್ಡ್‌ ಸದಸ್ಯರು ಇಲ್ಲಿಯೆ ಓಡಾಡುತ್ತಾರೆ. ಆದರೆ ಸಮಸ್ಯೆಗಳ ಪರಿಹಾರಕ್ಕೆ ಏನೂ ಮಾಡುತ್ತಿಲ್ಲ’ ಎನ್ನುವ ಅಳಲು ಡ್ಯಾಡಿ ಕಾಲೋನಿ ನಿವಾಸಿ ಅಜೀಂ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.