ADVERTISEMENT

ಜಿಲ್ಲೆಗೆ ಪಠ್ಯಪುಸ್ತಕಗಳ ಪೂರೈಕೆ ಆರಂಭ

ನಾಗರಾಜ ಚಿನಗುಂಡಿ
Published 20 ಏಪ್ರಿಲ್ 2017, 5:55 IST
Last Updated 20 ಏಪ್ರಿಲ್ 2017, 5:55 IST

ರಾಯಚೂರು: ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು 2017–18ನೇ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುವ ಪೂರ್ವದಲ್ಲೆ ಪಠ್ಯ ಪುಸ್ತಕಗಳನ್ನು ಪೂರೈಸುವ ಕಾರ್ಯವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಅರಂಭಿಸಿದೆ.ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಕಾರ್ಯವನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಖಾಸಗಿ ಮುದ್ರಕರಿಗೆ ಸರ್ಕಾರ ವಹಿಸಿದ್ದು, ಮಾರ್ಚ್‌ ಕೊನೆಯ ವಾರದಿಂದ ಪ್ರತಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಲಾರಿಗಳ ಮೂಲಕ ಪಠ್ಯಪುಸ್ತಕಗಳನ್ನು ತಲುಪಿಸಲಾಗುತ್ತಿದೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆಲ್ಲ ಪಠ್ಯಪುಸ್ತಕಗಳನ್ನು ತೆಗೆದಿಟ್ಟು ಕೊಳ್ಳುವುದು ಮತ್ತು ಶಾಲೆಗಳಿಗೆ ಅವುಗಳನ್ನು ಪೂರೈಸುವ ಕುರಿತು ಸೂಕ್ತ ಮಾರ್ಗದರ್ಶನವನ್ನೂ ನೀಡಲಾಗಿದೆ.‘ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಕ್ಕೆ ಪಠ್ಯಪುಸ್ತಕಗಳು ಬರಲಾರಂಭಿಸಿವೆ. ಪುಸ್ತಕಗಳು ಹಾಳಾಗದಂತೆ ಮುನ್ನಚ್ಚರಿಕೆ  ವಹಿಸುವುದಕ್ಕೆ ಬಿಇಒ ಅವರಿಗೆಲ್ಲ ಸೂಚನೆ ನೀಡಲಾಗಿದೆ. ಇಲಾಖೆಯ ಆಯುಕ್ತರು ಕಾಲಕಾಲಕ್ಕೆ ಕಳುಹಿಸುವ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸುತ್ತಿದ್ದೇವೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದರಿಂದ 10 ತರಗತಿವರೆಗಿನ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಉಚಿತ ಮತ್ತು ಮಾರಾಟಕ್ಕಾಗಿ ಯಾವ ತರಗತಿಗೆ ಎಷ್ಟು ಪಠ್ಯಪುಸ್ತಕಗಳು ಜಿಲ್ಲೆಗೆ ಬೇಕು ಎಂಬುದನ್ನು ಮಾರ್ಚ್‌ ಮೊದಲೇ ಡಿಡಿಪಿಐ ಅವರು ಶಿಕ್ಷಣ ಇಲಾಖೆಗೆ ಪಟ್ಟಿಯನ್ನು ಕಳುಹಿಸಿದ್ದಾರೆ.

ADVERTISEMENT

‘ವಿವಿಧ ಭಾಷೆಯ ಒಟ್ಟು 511 ಶೀರ್ಷಿಕೆಗಳಿರುವ ಪುಸ್ತಕಗಳ ಪಟ್ಟಿಯನ್ನು ಬೆಂಗಳೂರಿನಿಂದ ಕಳುಹಿಸಲಾಗಿತ್ತು. ಅದರಲ್ಲಿ ನಮ್ಮ ಜಿಲ್ಲೆಯಲ್ಲಿ 316 ಶೀರ್ಷಿಕೆಯ ಪಠ್ಯಪುಸ್ತಕಗಳು ಬೇಕಾಗಿದ್ದು, ಎಷ್ಟು ಬೇಕು ಎಂಬುದನ್ನು ಗುರುತಿಸಿ ತಿಳಿಸಲಾಗಿದೆ. ಇದಕ್ಕೂ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಕ್ರೋಢೀಕರಣ ಮಾಡಿಕೊಳ್ಳಲಾಗಿತ್ತು. ಬೇಡಿಕೆ ಪಟ್ಟಿ ಕೊಟ್ಟಿರುವಷ್ಟು ಪುಠ್ಯಪುಸ್ತಕಗಳು ಈಗ ಬರುತ್ತಿವೆ’ ಎಂದು ಮಂಜುನಾಥ ಅವರು ವಿವರಿಸಿದರು.

ಜಿಲ್ಲೆಯ ಶಾಲೆಗಳು: ಜಿಲ್ಲೆಯಲ್ಲಿ ಒಟ್ಟು 1,503 ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅನುದಾನಿತ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು 62 ಇದ್ದು, ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು 497 ಕಾರ್ಯನಿರ್ವಹಿಸುತ್ತಿವೆ.ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಒಟ್ಟು 432 ಪ್ರೌಢಶಾಲೆಗಳು ಜಿಲ್ಲೆಯಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.