ADVERTISEMENT

ಜಿಲ್ಲೆಯಲ್ಲಿ 7,755 ಆರ್‌ಟಿಇ ಅರ್ಜಿ

ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು; ದೇವದುರ್ಗ ತಾಲ್ಲೂಕಿನಲ್ಲಿ ಕಡಿಮೆ

ನಾಗರಾಜ ಚಿನಗುಂಡಿ
Published 18 ಏಪ್ರಿಲ್ 2017, 4:53 IST
Last Updated 18 ಏಪ್ರಿಲ್ 2017, 4:53 IST
ರಾಯಚೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ 2017–18ನೇ ಸಾಲಿನಲ್ಲಿ ಉಚಿತ ಶಾಲಾ ಪ್ರವೇಶಕ್ಕಾಗಿ ಈ ವರ್ಷ ಜಿಲ್ಲೆಯಲ್ಲಿ ಒಟ್ಟು 7,755 ಅನ್‌ಲೈನ್‌ ಮೂಲಕ ಅರ್ಜಿಗಳು ಸಲ್ಲಿಕೆಯಾಗಿವೆ.
 
ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು, ದೇವದುರ್ಗ ತಾಲ್ಲೂಕಿನಲ್ಲಿ ಅತಿ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ. ಜನವರಿ 20ರಿಂದ ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.
 
ಅರ್ಜಿ ಸಲ್ಲಿಕೆ ಕೊನೆಯ ದಿನವಾಗಿದ್ದ ಮಾರ್ಚ್‌ 31 ದಿನವನ್ನು ಏಪ್ರಿಲ್‌ 10 ಮತ್ತು ಏಪ್ರಿಲ್‌ 15ಕ್ಕೆ ಎರಡು ಬಾರಿ ಮುಂದೂಡಲಾಗಿತ್ತು. ಕೊನೆಯ ದಿನ ಮುಗಿದಿದ್ದು, ಆರ್‌ಟಿಇ ಅಡಿಯಲ್ಲಿ ಲಭ್ಯವಿರುವ ಶಾಲಾ ಸೀಟುಗಳ ಎರಡು ಪಟ್ಟು ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
 
ಅರ್ಜಿದಾರರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಮಗು ಹಾಗೂ ಪೋಷಕರ ಹೆಬ್ಬೆರಳನ್ನು ಬಯೊಮೆಟ್ರಿಕ್‌ ಸ್ಕ್ಯಾನ್‌ ಮಾಡಿಕೊಳ್ಳಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಅರ್ಜಿಗಳ ಪ್ರತಿಗಳನ್ನು ಪಡೆದುಕೊಳ್ಳಲಾಗಿದೆ. ಅರ್ಜಿ ಸಲ್ಲಿಸುವುದು ಸೇರಿದಂತೆ ಆರ್‌ಟಿಇ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ಪ್ರತಿಯೊಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ನೋಡಲ್‌ ಅಧಿಕಾರಿಯನ್ನು ನಿಯೋಜಿಸಲಾಗಿತ್ತು. 
 
ಸೀಟು ಹಂಚಿಕೆ ನಿರೀಕ್ಷೆ: ಎಲ್‌ಕೆಜಿ ಮತ್ತು 1ನೇ ತರಗತಿ ಹಂತದಲ್ಲಿ ಮಾತ್ರ ಪ್ರವೇಶ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಒಳ್ಳೆಯ ಶಾಲೆಯಲ್ಲಿ ಪ್ರವೇಶ ದೊರೆಯುವ ನಿರೀಕ್ಷೆಯಲ್ಲಿಯೇ ಪಾಲಕರು ಅರ್ಜಿ ಸಲ್ಲಿಸಿದ್ದಾರೆ.
 
ಶಾಲೆಗಳಿರುವ ಪ್ರದೇಶ, ಅರ್ಜಿದಾರನ ವಿಳಾಸ, ಕುಟುಂಬದ ಆದಾಯವೆಷ್ಟು ಎನ್ನುವುದು ಸೇರಿದಂತೆ ವಿವಿಧ ಮಾನದಂಡಗಳನ್ನು ಆಧರಿಸಿ ಕಂಪ್ಯೂಟರ್‌ ಮೂಲಕವೇ ಸೀಟುಗಳ ಹಂಚಿಕೆಯು ನಡೆಯಲಿದೆ. 
 
‘ಬಡವರಿಗಾಗಿ ಸರ್ಕಾರವು ಜಾರಿಗೆ ತಂದ ಆರ್‌ಟಿಇಯಿಂದ ಅನುಕೂಲವಾಗುತ್ತದೆ ಎನ್ನುವ ಆಸೆಯಿಂದ ಅರ್ಜಿ ಸಲ್ಲಿಸಿದ್ದೇನೆ. ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್‌) ನಮ್ಮ ಕುಟುಂಬವಿದೆ. ವಾರ್ಷಿಕ ಆದಾಯ ತುಂಬಾ ಕಡಿಮೆ ಇದೆ.
 
ಅರ್ಹತೆ ಆಧರಿಸಿ ಸೀಟು ಕೊಡುವುದಿದ್ದರೆ ನಮ್ಮಂತಹ ಬಡವರಿಗೆ ಆದ್ಯತೆಯಿಂದ ಹಂಚಿಕೆ ಆಗಬೇಕು. ಪಕ್ಷಪಾತವಿಲ್ಲದೆ ಕಂಪ್ಯೂಟರ್‌ ಮೂಲಕ ಸೀಟು ಹಂಚಿಕೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಡ್ಯಾಡಿ ಕಾಲೊನಿ ನಿವಾಸಿ ಮರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.