ADVERTISEMENT

ಜಿಲ್ಲೆಯ 15 ಪ್ರೌಢಶಾಲೆಗಳು ಪ್ರತಿಶತ ಸಾಧನೆ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:40 IST
Last Updated 14 ಮೇ 2017, 8:40 IST
ಜಿಲ್ಲೆಯ 15 ಪ್ರೌಢಶಾಲೆಗಳು ಪ್ರತಿಶತ ಸಾಧನೆ
ಜಿಲ್ಲೆಯ 15 ಪ್ರೌಢಶಾಲೆಗಳು ಪ್ರತಿಶತ ಸಾಧನೆ   

ರಾಯಚೂರು:  ಜಿಲ್ಲೆಯ ಏಳು ಸರ್ಕಾರಿ ಹಾಗೂ ಎಂಟು ಖಾಸಗಿ ಪ್ರೌಢಶಾಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪ್ರತಿಶತ ಸಾಧನೆ ಮಾಡಿವೆ. ಜಿಲ್ಲೆಯಲ್ಲಿರುವ ಒಟ್ಟು 228 ಪ್ರೌಢಶಾಲೆಗಳಲ್ಲಿ ಎರಡು ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಮಾಯಾದೇವಿ ಶಾಲೆ, ಮಾನ್ವಿಯ ರಾಜೊಳ್ಳಿ ಶಾಲೆ ಫಲಿತಾಂಶದಲ್ಲಿ ಏನೂ ಸಾಧನೆ ಮಾಡಿಲ್ಲ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಮೊದಲ 10 ವಿದ್ಯಾರ್ಥಿಗಳಲ್ಲಿ ರಾಯಚೂರು ತಾಲ್ಲೂಕಿನ ವಿದ್ಯಾರ್ಥಿಗಳು ಇನ್ನುಳಿದ ತಾಲ್ಲೂಕುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹತ್ತು ವಿದ್ಯಾರ್ಥಿಗಳಲ್ಲಿ ರಾಯಚೂರು ತಾಲ್ಲೂಕಿನ ಶಾಲೆಯ ಎಂಟು ವಿದ್ಯಾರ್ಥಿಗಳಿದ್ದಾರೆ. ಸಿಂಧನೂರು ತಾಲ್ಲೂಕಿನ ಓರ್ವ ವಿದ್ಯಾರ್ಥಿ ಮತ್ತು ಮಾನ್ವಿ ತಾಲ್ಲೂಕಿನಲ್ಲಿ ಸಮಾನ ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿಗಳು ಗರಿಷ್ಠ ಅಂಕ ಪಡೆದವರ ಪಟ್ಟಿಯಲ್ಲಿದ್ದಾರೆ.

ರಾಯಚೂರು ನಗರದ ಸೇಂಟ್‌ ಮೇರಿ ಕಾನ್ವೆಂಟ್‌ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಮತ್ತು  ಶ್ರೀ ಚೈತನ್ಯ ಟೆಕ್ನೊ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದವರಲ್ಲಿ ಇರುವುದು ವಿಶೇಷ.

ADVERTISEMENT

ಚೈತನ್ಯ ಟೆಕ್ನೋ ಪ್ರೌಢಶಾಲೆಯ ಮಣಿಶ್ರಾವ್ಯ 621 (ಶೇ 99.36) ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸೇಂಟ್ ಮೇರಿ ಕಾನ್ವೆಂಟ್ ಶಾಲೆಯ ಮಂಜುಶ್ರೀ 620 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸೇಂಟ್ ಮೇರಿ ಪ್ರೌಢಶಾಲೆಯ ಸೌಮ್ಯಲತಾ ಹಾಗೂ ಆರ್‌ಟಿಪಿಎಸ್ ಶಾಲೆಯ ಸಂಜನಾ ಎಸ್. ತಲಾ 617 ಅಂಕ ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಶಕ್ತಿನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜ್ಯೋತಿ 510 ಅಂಕ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ಎಸ್‌ಆರ್‌ಎಸ್ ಕಾಲೇಜಿನ ತರುಣ್ ಪಾಟೀಲ್ ಹಾಗೂ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವರುಣ್ ಆರ್. ಮೇಟಿ 616 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ರಾಯಚೂರು ಕೊನೆಯ ಸ್ಥಾನ: 2016ರ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದ ಮಾನ್ವಿ ತಾಲ್ಲೂಕು ಈ ಬಾರಿ ಪ್ರಥಮ ಸ್ಥಾನ ಪಡೆದಿದೆ. ಮೊದಲನೇ ಸ್ಥಾನದಲ್ಲಿದ್ದ ರಾಯಚೂರು ತಾಲ್ಲೂಕು ಕೊನೆ ಸ್ಥಾನಕ್ಕಿಳಿದಿದೆ.

ಮಾನ್ವಿ ತಾಲ್ಲೂಕಿನಲ್ಲಿ 4,854 ವಿದ್ಯಾರ್ಥಿಗಳಲ್ಲಿ 4,030 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ರಾಯಚೂರು ತಾಲ್ಲೂಕಿನಲ್ಲಿ 7,548 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 5027 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಉಳಿದಂತೆ ದೇವದುರ್ಗ ಎರಡನೇ ಸ್ಥಾನ, ಸಿಂಧನೂರು 3ನೇ ಸ್ಥಾನ ಹಾಗೂ ಲಿಂಗಸುಗೂರು ನಾಲ್ಕನೇ ಸ್ಥಾನ ಪಡೆದಿವೆ. ಹಿಂದಿನ ವರ್ಷ ಸಾಧನೆಯ ಸ್ಥಾನದಲ್ಲಿ ಯಾವುದೇ ಬದಲಾವಣೆಯನ್ನು ಈ ತಾಲ್ಲೂಕುಗಳ ಮಾಡಿಕೊಂಡಿಲ್ಲ.

ಜಿಲ್ಲೆಯಲ್ಲಿ 14,853 ಬಾಲಕರು ಪರೀಕ್ಷೆ ಬರೆದಿದ್ದರು. 10,380 ಪಾಸಾಗುವ ಮೂಲಕ ಶೇ 69.88 ಫಲಿತಾಂಶ ಪಡೆದಿದ್ದಾರೆ. 11,749 ಬಾಲಕಿಯರಲ್ಲಿ 8,230 ಬಾಲಕಿಯರು ಪಾಸಾಗುವ ಮೂಲಕ ಶೇ 70.05 ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.