ADVERTISEMENT

ಟೆಲಿ ಶಿಕ್ಷಣ ಯೋಜನೆ: 73 ಕಾಲೇಜು ಆಯ್ಕೆ

ಹೈದರಾಬಾದ್‌ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ತೆರೆದ ಬಾಗಿಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 9:41 IST
Last Updated 30 ಜುಲೈ 2015, 9:41 IST

ರಾಯಚೂರು: ಪದವಿ ಶಿಕ್ಷಣ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಪ್ರಮಾಣ ಹೆಚ್ಚಿಸಲು ಕಾಲೇಜು ಶಿಕ್ಷಣ ಇಲಾಖೆಯಿಂದ ರೂಪಿಸಿರುವ ಟೆಲಿ ಶಿಕ್ಷಣ ಯೋಜನೆಗೆ ರಾಜ್ಯದಲ್ಲಿ 73 ಕಾಲೇಜುಗಳು ಆಯ್ಕೆಯಾಗಿವೆ.

ಹೈದರಾಬಾದ್‌ ಕರ್ನಾಟಕ ಪ್ರದೇಶದ 64 ಕಾಲೇಜುಗಳು ಈ ಪಟ್ಟಿಯಲ್ಲಿವೆ. ಟೆಲಿ ಶಿಕ್ಷಣ ಯೋಜನೆ ಜಾರಿಗೊಳಿಸುವ ಮೂಲಕ ನುರಿತ ಉಪನ್ಯಾಸಕರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಬೋಧನೆಗೆ ಅವಕಾಶವಾಗಲಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರಿಂದಲೂ ಬೋಧನೆ ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ.

ರಾಜ್ಯದ ಶೈಕ್ಷಣಿಕ ಫಲಿತಾಂಶದಲ್ಲಿ ಪ್ರತಿಬಾರಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಕಳಪೆ ಸಾಧನೆ ಆಗುತ್ತಿದೆ. ಇದನ್ನು ಸುಧಾರಿಸಲು ಟೆಲಿ ಶಿಕ್ಷಣ ಯೋಜನೆಯಿಂದ ಅನುಕೂಲವಾಗಲಿದೆ.  ಬಡತನ, ಮಾಹಿತಿ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುಲು ವಂಚಿತರಾಗುವ ಪದವಿ ವಿದ್ಯಾರ್ಥಿಗಳಿಗೆ ಈ ಉನ್ನತ ಮಟ್ಟದ ತರಬೇತಿ ನೀಡುವುದು ಮುಖ್ಯ ಉದ್ದೇಶದಿಂದ ಐದು ವರ್ಷಗಳ ಅವಧಿಗೆ ಟೆಲಿ ಶಿಕ್ಷಣ ಯೋಜನೆಯ ಒಪ್ಪಂದವನ್ನು ಕಾಲೇಜು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.

ಬೆಂಗಳೂರಿನ ಪ್ರತಿಷ್ಠಿತ ಐಐಎಂ ಸಂಸ್ಥೆ ಹಾಗೂ ಒಕ್ಕೂಟ  ಸಂಸ್ಥೆಗಳ ಸಹಯೋಗದಲ್ಲಿ ಟೆಲಿ ಶಿಕ್ಷಣ ಯೋಜನೆ ಜಾರಿಗೊಳ್ಳಲಿದೆ. ಈಗಾಗಲೇ ಕೌಶಲ್ಯ ಆಧಾರಿತ ಶಿಕ್ಷಣ ನೀಡಲು ಮುಂದಾಗಿರುವ ಇಲಾಖೆ, ನೈಪುಣ್ಯ ತರಬೇತಿಯೂ ನೀಡುವ ಮೂಲಕ ಉದ್ಯೋಗ ಒದಗಿಸಲು ಪ್ರಯತ್ನಿಸುತ್ತಿದೆ. ಈಗಾಗಲೇ ಪೂರಕ ಸೌಲಭ್ಯಗಳ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದ್ದು, ಸಂಸ್ಥೆಯ ಪ್ರತಿನಿಧಿಗಳು ಆಯಾ ಕಾಲೇಜುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ನಂತರ ಉದ್ದೇಶಿತ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
74 ಪದವಿ ಕಾಲೇಜುಗಳಲ್ಲಿ ಮೊದಲ ಹಂತದಲ್ಲಿ ಪ್ರಾರಂಭವಾಗುವ ಈ ಯೋಜನೆ, ಯಶಸ್ಸಿನ ಆಧಾರದ ಮೇಲೆ ರಾಜ್ಯದಲ್ಲಿ ವಿಸ್ತರಣೆ ಆಗಲಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಈಗಾಗಲೇ ಜಾರಿಗೊಳಿಸಲಾಗಿರುವ ಮಾದರಿಯಲ್ಲಿ ಟೆಲಿ ಶಿಕ್ಷಣ ಯೋಜನೆಯನ್ನು ರೂಪಿಸಲಾಗಿದೆ.

ಉತ್ತೇಜನ: ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದರಬಾದ್‌ ಕರ್ನಾಟಕ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಟೆಲಿ ಶಿಕ್ಷಣ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಅನುಮತಿ ನೀಡಿದೆ.
ಪಿ.ಹನುಮಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.