ADVERTISEMENT

ತಿರುವು ಪಡೆದ ಅಪಹರಣ ಪ್ರಕರಣ

ವೈದ್ಯಕೀಯ ಪ್ರಮಾಣಪತ್ರ ತಿದ್ದುಪಡಿ: ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:08 IST
Last Updated 22 ಮಾರ್ಚ್ 2017, 9:08 IST

ಲಿಂಗಸುಗೂರು: ಬೀದರ್‌ನ ಮುಸ್ಲಿಂ ಯುವಕನೊಬ್ಬ ತನ್ನೊಂದಿಗೆ ಅಪ್ರಾಪ್ತ ಹಿಂದೂ ಬಾಲಕಿಯನ್ನು ಪಟ್ಟಣಕ್ಕೆ ಕರೆದುತಂದು ಆಕೆಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ವಿವಾಹ ನೋಂದಣಿ ಮಾಡಿಕೊಂಡಿರುವುದು ಮಂಗಳವಾರ ಪತ್ತೆಯಾಗಿದೆ. ಈ ಮೂಲಕ ಪ್ರಕರಣ ಹೊಸ ತಿರುವು ಪಡೆಯುತ್ತಿದೆ.

ಬೀದರ್‌ ಮಹಿಳಾ ಪೊಲೀಸ್‌ ಠಾಣೆಯ ಸಿಪಿಐ ಮಲ್ಲಮ್ಮ ಚೋಬೆ ನೇತೃತ್ವದ ತಂಡ  ಅಪಹರಣ ಪ್ರಕರಣದ ಕುರಿತು ತನಿಖೆಗಾಗಿ ಪಟ್ಟಣಕ್ಕೆ ಭೇಟಿ ನೀಡಿತು. ಮೊಬೈಲ್‌ಗಳಲ್ಲಿ ಹರಿದಾಡಿದ ಮಾಹಿತಿ ಆಧರಿಸಿ ಅಪಹರಣಕ್ಕೊಳಗಾದ ಬಾಲಕಿ ಮತ್ತು ಅಪಹರಣಕಾರರು ಲಿಂಗಸುಗೂರು ತಾಲ್ಲೂಕಿನಲ್ಲಿ ಇದ್ದಾರೆ ಎಂದು ಪೊಲೀಸರ ತಂಡವು ತನಿಖೆ ಮುಂದುವರಿಸಿದೆ.

ಲಿಂಗಸುಗೂರು ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಆಗಿರುವುದನ್ನು ತಂಡ ಪರಿಶೀಲಿಸಿತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆನಂತರ ನೋಂದಣಿಗಾಗಿ ನೀಡಿದ ವಾಸಸ್ಥಳ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಇತರೆ ಸಾಕ್ಷಿದಾರರಿಂದ ಮಾಹಿತಿ ಪಡೆದರು.

‘ಅಪಹರಣ ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಈಗಲೇ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗದು’ ಎಂದು ತಂಡದ ಮುಖ್ಯಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಮಂಡಳಿಯು ಬಾಲಕಿಗೆ ನೀಡಿದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ 17 ರಿಂದ 18 ವರ್ಷ ಎಂದು ದೃಢೀಕರಣ ನೀಡಿದ್ದಾರೆ. ಆದರೆ, ನೊಂದಣಾಧಿಕಾರಿ ಕಚೇರಿಯಲ್ಲಿ 18ರಿಂದ 19 ವರ್ಷ ಎಂದು ಅದನ್ನು ತಿದ್ದುಪಡಿ ಮಾಡಿದ ದಾಖಲೆ ಪತ್ತೆಯಾಗಿದೆ. ಬಾಲಕಿ ಬೀದರ್‌ ನಿವಾಸಿಯಾಗಿದ್ದರೂ, ಲಿಂಗಸೂಗುರು ನಿವಾಸಿ ಎಂದು ನಮೂದಿಸಿದ್ದು, ಎಲ್ಲವನ್ನೂ ನಕಲಿ ದಾಖಲೆ ಸೃಷ್ಟಿಸಲಾಗಿದೆ.

ಈ ಕುರಿತು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಬಸಪ್ಪ ಅವರನ್ನು ಸಂಪರ್ಕಿಸಿದಾಗ ‘ತಾಲ್ಲೂಕು ವೈದ್ಯಕೀಯ ಮಂಡಳಿ ವೈದ್ಯಕೀಯ ಪ್ರಮಾಣ ಪತ್ರ ನೀಡಿದ್ದು ನಿಜ. ಆದರೆ ನೋಂದಣಾಧಿಕಾರಿ ಕಚೇರಿಗೆ ನೀಡುವಾಗ ತಿದ್ದುಪಡಿ ಮಾಡಿರುವುದು ತಮಗೆ ಗೊತ್ತಿಲ್ಲ.

ತಮ್ಮ ದಾಖಲೆ ಪ್ರಕಾರ ಅವಳ ವಯಸ್ಸು 17ರಿಂದ 18 ಮಾತ್ರ’ ಎಂದು ಖಚಿತಪಡಿಸಿದರು. ತನಿಖಾ ತಂಡದಲ್ಲಿ ಎಎಸ್‌ಐ ರೇಣುಕಾ, ಪೇದೆ ಸಲ್ಲಾವುದ್ದೀನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.