ADVERTISEMENT

ನಗರದಲ್ಲಿ ಗಣ್ಯರ ದಂಡು: ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 6:44 IST
Last Updated 12 ಆಗಸ್ಟ್ 2017, 6:44 IST
ರಾಯಚೂರಿನಲ್ಲಿ ನಡೆಯುವ ಕಾಂಗ್ರೆಸ್‌ ಸಮಾವೇಶಕ್ಕಾಗಿ ಸಿದ್ಧಗೊಂಡ ವೇದಿಕೆಯನ್ನು ಐಜಿಪಿಗಳಾದ ಅಲೋಕಕುಮಾರ್‌ ಹಾಗೂ ಮುರುಗನ್‌ ಅವರು ಶುಕ್ರವಾರ ಪರಿಶೀಲಿಸಿದರು
ರಾಯಚೂರಿನಲ್ಲಿ ನಡೆಯುವ ಕಾಂಗ್ರೆಸ್‌ ಸಮಾವೇಶಕ್ಕಾಗಿ ಸಿದ್ಧಗೊಂಡ ವೇದಿಕೆಯನ್ನು ಐಜಿಪಿಗಳಾದ ಅಲೋಕಕುಮಾರ್‌ ಹಾಗೂ ಮುರುಗನ್‌ ಅವರು ಶುಕ್ರವಾರ ಪರಿಶೀಲಿಸಿದರು   

ರಾಯಚೂರು: ರಾಷ್ಟ್ರೀಯ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಸಾರ್ವತ್ರಿಕ ಚುನಾವಣೆ ಬಳಿಕ ರಾಯಚೂರು ನಗರಕ್ಕೆ ಶನಿವಾರ ಮತ್ತೊಮ್ಮೆ ಬರುತ್ತಿದ್ದು, ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪೊಲೀಸರು ಭಾರಿ ಬಂದೋಬಸ್ತ್‌ ಏರ್ಪಡಿಸಿದ್ದಾರೆ.

ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣವು ಪೊಲೀಸರಿಂದ ತುಂಬಿಕೊಂಡಿದೆ. ವಿಶ್ವವಿದ್ಯಾಲಯದ ಮೈದಾನದಲ್ಲಿ 350 ಅಡಿ ಅಗಲ ಹಾಗೂ 650 ಅಡಿ ಉದ್ದದ ಬೃಹತ್‌ ವೇದಿಕೆ ಸಿದ್ಧವಾಗಿದೆ. ಹೈದರಾಬಾದ್‌ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.

ರಾಜ್ಯ ಹಾಗೂ ಸ್ಥಳೀಯ ಕಾಂಗ್ರೆಸ್‌ ಪಕ್ಷದ ಮುಖಂಡರಲ್ಲಿ ಸಂಭ್ರಮ ಮನೆಮಾಡಿದ್ದು, ಸಮಾವೇಶಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ ಕರ್ನಾಟಕ ವಿಶೇಷ ಮೀಸಲಾತಿ 371–ಜೆ ಜಾರಿಯಾಗಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ಸಮಾವೇಶದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತಿದೆ.

ADVERTISEMENT

ಬಂದೋಬಸ್ತ್‌: ಗಣ್ಯರ ಬಂದೋಬಸ್ತ್‌ಗಾಗಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷ ಭದ್ರತಾ ಪಡೆಯು ಶುಕ್ರವಾರದಿಂದಲೆ ನಗರದಲ್ಲಿ ಬೀಡುಬಿಟ್ಟಿದೆ. ಬಳ್ಳಾರಿ ವಲಯ, ಈಶಾನ್ಯ ವಲಯ, ಪೂರ್ವ ವಲಯ, ಉತ್ತರ ವಲಯದಿಂದ 1,600 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇಬ್ಬರು ಪೊಲೀಸ್‌ ಮಹಾನಿರ್ದೇಶಕರು (ಐಜಿಪಿ), 12 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿಎಸ್ಪಿ, ಪಿಎಸ್‌ಐ ಸೇರಿ ನೂರಾರು ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಲೋಕಸಭೆ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಟ್‌, ಸೇರಿದಂತೆ ರಾಜ್ಯದ ಸಚಿವರು ಹಾಗೂ ರಾಜಕೀಯ ಮುಖಂಡರು, ವಿವಿಧ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.