ADVERTISEMENT

ನಿಂತ ಮಳೆ, ನಿಲ್ಲದ ಮನೆ ಕುಸಿತ: ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 7:05 IST
Last Updated 1 ಸೆಪ್ಟೆಂಬರ್ 2014, 7:05 IST

ಮುದಗಲ್‌: ವಾರದಿಂದ ಸುರಿಯುತ್ತಿರುವ ಮಳೆಯಿಂದ ಭಾನುವಾರ ಮತ್ತೆ ನಾಲ್ಕು ಮನೆಗಳು ಕುಸಿದಿವೆ. ಮಟ್ಟೂರು ಗ್ರಾಮದ ಪವಡಪ್ಪ, ಶರಣಪ್ಪ ಹಡಪದ, ಶಂಕ್ರಪ್ಪ ನಂದಿಹಳ್ಳಿ ಪಟ್ಟಣದ ಪದ್ದಮ್ಮ ಕಬ್ಬೆರ ಅವರ ಮನೆ ಕುಸಿದಿವೆ. ಬನ್ನಿಗೋಳದ ಬಸನಗೌಡ ಮರಳಿಯವರ ಹೊಲದಲ್ಲಿನ ಎಳ್ಳುಬೆಳೆಗೆ ಹಾನಿಯಾಗಿದೆ. ಎಳ್ಳು, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ಇತರ ಬೆಳೆಗಳು ಕಟಾವು ಹಂತಕ್ಕೆ ಬಂದಿದ್ದು, ಮಳೆಯಿಂದ ರೈತರಿಗೆ ಚಿಂತೆಯಾಗಿದೆ.

ಸ್ಥಳೀಯ ಹಳೆಪೇಟೆ ಕೆರೆ ಹಾಗೂ ಕೆಂಚಮ್ಮನ ಕೆರೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಹೆಚ್ಚು ಮಳೆಯಿಂದ ನಾಗರಾಳದ ಪೇರಲ ಮರಗಳಿಗೆ ಜಂಗ್ ರೋಗ ತಗುಲಿದೆ.  ಛತ್ತ ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಕಡಿದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಮನೆ ಕುಸಿತ: ಪರಿಶೀಲನೆ 
ಹಟ್ಟಿ ಚಿನ್ನದ ಗಣಿ:
ಬುಧವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಇಲ್ಲಿನ 1, 2, ಮತ್ತು 3ನೇ ವಾರ್ಡ್‌ಗಳಲ್ಲಿ ಅಂದಾಜು 14 ಮನೆಗಳು ಕುಸಿದಿವೆ.ಹರಿಶ್ಚಂದ್ರಪ್ಪ,  ಗಿರಿಯಪ್ಪ, ಹನುಮವ್ವ, ಗಂಗಮ್ಮ, ದೇವಕೆಮ್ಮ, ಕೆ.ಬಾಬು, ದುರಪ್ಪ, ಗುಂಡಪ್ಪ, ಶಶಿಕಲ ಅವರ ಮನೆಗಳು ಭಾಗಶಃ ಕುಸಿದಿವೆ. ಗ್ರಾಮ ಲೆಕ್ಕಾಧಿಕಾರಿ ಜಾನಪ್ಪ ಭಾನು ವಾರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ತಗ್ಗು ಪ್ರದೇಶದ ವಾರ್ಡ್‌ಗಳ ರಸ್ತೆಗಳು ಜಲಾವೃತಗೊಂಡಿವೆ. 8ನೇ ವಾರ್ಡ್‌ನ ರಾಮ್‌ ರಹೀಮ್‌ ಹಾಗೂ ಅಬ್ದುಲ್ಲಾ ಕಾಲೊನಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೇಲೆ ನಿಂತಿದೆ. ಮಳೆ ಭಾನುವಾರವೂ ಮುಂದುವರಿದಿದ್ದು, ಆಗಸ್ಟ್‌ ತಿಂಗಳಲ್ಲಿ ಒಟ್ಟು 299 ಮಿ.ಮೀ. ಮಳೆ ಬಿದ್ದಿದೆ ಎಂದು ಗಣಿ ಮಳೆ ಮಾಪನ ಕೇಂದ್ರದ ಮೂಲಗಳು ತಿಳಿಸಿವೆ.

ಹಾನಿ: ಸಮೀಕ್ಷೆಗೆ ಸೂಚನೆ
ಸಿಂಧನೂರು
: ತಾಲ್ಲೂಕಿನಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ, ಜನರ ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಹಶೀಲ್ದಾರ್‌ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ವರ್ಷ ಆಗಸ್ಟ್‌ನಲ್ಲಿ 59 ಮಿಲಿ ಮೀಟರ್ ಮಳೆಯಾಗಿತ್ತು. ಈ ಬಾರಿ 164 ಮಿಲಿ ಮೀಟರ್ ಮಳೆ ಸುರಿದಿದೆ. ಇದರಿಂದ ರಾಜ್ಯ ಹೆದ್ದಾರಿಗಳು, ಚರಂಡಿಗಳು, ಗ್ರಾಮೀಣ ರಸ್ತೆಗಳು ಹಾಳಾಗಿವೆ. ವಿದ್ಯುತ್ ಕಂಬ ನೆಲೆಕ್ಕುರುಳಿವೆ. ದನಕರುಗಳು ಸಾವನ್ನಪ್ಪಿವೆ. ಕೆಲವರು ಮನೆ ಕಳೆದುಕೊಂಡಿ ದ್ದಾರೆ. ಈ ಎಲ್ಲದರ ಬಗ್ಗೆ ಅಧಿಕಾರಿಗಳು ಎರಡು ದಿನದೊಳಗೆ ಮಾಹಿತಿ ಸಂಗ್ರಹಿಸಲು ಸೂಚಿಸ ಲಾಗಿದೆ ಎಂದರು.

ತಾಲೂಕಿನಾದ್ಯಂತ ₨12 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ, ನಂತರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪ್ರಸ್ತಾವ ಕಳುಹಿಸಗುವುದು ಎಂದು ತಿಳಿಸಿದರು.
ತಹಶೀಲ್ದಾರ್‌ ಎಂ.ಗಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.