ADVERTISEMENT

ನೀರು, ಮೇವು ಒದಗಿಸಲು ಆಗ್ರಹ

ಭಾರತ ಕಮ್ಯೂನಿಸ್ಟ್‌ ಪಕ್ಷ ಧರಣಿ; ಪ್ರಧಾನ ಮಂತ್ರಿ, ಮುಖ್ಯಮಂತ್ರಿಗೆ ಮನವಿ ರವಾನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:55 IST
Last Updated 11 ಮಾರ್ಚ್ 2017, 5:55 IST
ರಾಯಚೂರು:  ಭೀಕರ ಬರಗಾಲ ಇರುವುದರಿಂದ ಕುಡಿಯಲು ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು. ಗೌರವಧನ ಆಧಾರದ ಮೇಲೆ ದುಡಿಯುವ ಅಸಂಘಟಿತ ಕಾರ್ಮಿಕರಿಗೆ ₹18 ಸಾವಿರ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಜಿಲ್ಲಾ ಘಟಕ ಶುಕ್ರವಾರ ಧರಣಿ ನಡೆಸಿತು.
 
ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
 
ರಾಜ್ಯದ 160 ತಾಲ್ಲೂಕುಗಳಲ್ಲಿ ಬರಗಾಲ ಎದುರಾಗಿ ಮುಂಗಾರು, ಹಿಂಗಾರು ಮಳೆ ವಿಫಲತೆಯಿಂದ ₹25 ಸಾವಿರ ಕೋಟಿ ಬೆಳೆ ನಷ್ಟವಾಗಿದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೇ ರಾಜಕಾರಣದಲ್ಲಿ ತೊಡಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಬರಗಾಲದಿಂದ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮೇವು ಬ್ಯಾಂಕ್ ಸ್ಥಾಪಿಸಬೇಕು. ಕೃಷಿ ಆಧಾರಿತ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು.
 
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ₹18 ಸಾವಿರ ಕನಿಷ್ಟ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಅಡುಗೆ ಅನಿಲ ಬೆಲೆ ಏರಿಕೆ ಹಿಂಪಡೆಯಬೇಕು. ಸೇವಾ ಶುಲ್ಕ ಹೆಸರಿನಲ್ಲಿ ಹಣ ಪಡೆಯಲು ದಂಡ ಹಾಕುವುದು ನಿಲ್ಲಿಸಬೇಕು.

ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಹೊಸ ವೇತನ ಒಪ್ಪಂದ ಜಾರಿಗೊಳಿಸಿ ಸಹಕಾರ ಸಂಘದ ನೌಕರರನ್ನು ಕಂಪೆನಿ ನೌಕರರೆಂದು ಪರಿಗಣಿಸಬೇಕು. ಎಪಿಎಂಸಿ ಲೈಸೆನ್ಸ್‌ ಹೊಂದಿದ ಹಮಾಲರಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಸಿಂಧನೂರು ಎಪಿಎಂಸಿಯಲ್ಲಿ ಶ್ರಮಿಕ ಭವನ ತೆರವುಗೊಳಿಸಿ ನೂತನ ಭವನ ನಿರ್ಮಿಸಬೇಕು. 
ಹಮಾಲರಿಗೆ ಹೊಸದಾಗಿ ಲೈಸೆನ್ಸ್‌ ನೀಡಬೇಕು ಎಂದು ಒತ್ತಾಯಿಸಿದರು.
 
ಪ್ರತಿಭಟನೆಯಲ್ಲಿ ಬಾಷು ಮಿಯಾ, ಸಂಗಯ್ಯಸ್ವಾಮಿ ಹಿರೇಮಠ, ಶಾಂತಪ್ಪ, ಡಿ.ಹೆಚ್. ಕಂಬಳಿ, ವೆಂಕನಗೌಡ, ತಿಪ್ಪಯ್ಯಶೆಟ್ಟಿ, ಸುಲಚನಾ, ಅಮರಮ್ಮ ಪಾಟೀಲ್, ಲಕ್ಷ್ಮೀ, ಹನುಮಂತಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.