ADVERTISEMENT

ನೋಟು ರದ್ದತಿಗೆ ವರ್ಷ: ಕರಾಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:14 IST
Last Updated 9 ನವೆಂಬರ್ 2017, 9:14 IST

ರಾಯಚೂರು: ದೊಡ್ಡ ಮುಖಬೆಲೆಯ ನೋಟುಗಳ ಅಮಾನ್ಯಗೊಂಡು ನ.8ಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪಕ್ಷದಿಂದ ನಗರದ ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಕರಾಳ ದಿನ ಆಚರಿಸಲಾಯಿತು. ಆನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ನೋಟು ಅಮಾನ್ಯಗೊಳಿಸಿದ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ಪತ್ತೆಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಯಾವುದೇ ಕಪ್ಪುಹಣ ಪತ್ತೆಯಾಗಿಲ್ಲ. ಬದಲಾಗಿ ದೇಶದ ಆರ್ಥಿಕತೆಗೆ ಭಾರಿ ಪೆಟ್ಟು ಬಿದ್ದಿದ್ದು, ದೇಶದ ಪ್ರಗತಿ ಕುಂಠಿತಗೊಂಡಿದೆ. ಜಿಡಿಪಿ ದರವೂ ಕುಸಿತಗೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೋಟು ಅಮಾನ್ಯಗೊಳಿಸಿ ಒಂದು ವರ್ಷ ಕಳೆದರೂ, ನೋಟು ಅಮಾನ್ಯದ ಉದ್ದೇಶಗಳು ಈಡೇರಿಸಲು ಮೋದಿ ಅವರಿಗೆ ಸಾಧ್ಯವಾಗಿಲ್ಲ. ಇದರಿಂದ ನೋಟು ಅಮಾನ್ಯದ ಕ್ರಮ ಸಂಪೂರ್ಣವಾಗಿ ವಿಫಲಗೊಂಡಿದೆ. ಬ್ಯಾಂಕುಗಳಿಗೆ ಎಷ್ಟು ಕಪ್ಪು ಹಣ ಜಮಾವಣೆಗೊಂಡಿದೆ ಎಂಬ ಮಾಹಿತಿಯನ್ನು ಕೂಡ ಸರ್ಕಾರ ಸಾರ್ವಜನಿಕರಿಗೆ ಒದಗಿಸಿಲ್ಲ’
ಎಂದು ದೂರಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಮಾತನಾಡಿ, ಕಪ್ಪು ಹಣವನ್ನು ಬಡವರ ಖಾತೆಗೆ ಜಮಾ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ನೋಟು ಅಮಾನ್ಯದ ನಂತರ ಹೊಸ ನೋಟುಗಳನ್ನು ಪಡೆಯುವಲ್ಲಿ 100ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡರು. ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಬಡಜನರು ತೊಂದರೆ ಅನುಭವಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಘಟಕ ಹಂಗಾಮಿ ಅಧ್ಯಕ್ಷ ರಾಮಣ್ಣ ಇರಬಗೇರಾ, ರಾಜಾರಾಯಪ್ಪ ನಾಯಕ, ಜಯಣ್ಣ, ಪಾರಸಮಲ್‌ ಸುಖಾಣಿ, ಬಷೀರುದ್ದೀನ್‌, ಅಸ್ಲಂಪಾಷ, ರವಿಪಾಟೀಲ, ನಿರ್ಮಲಾ ಬೆಣ್ಣೆ, ಜಿ.ಬಸವರಾಜರೆಡ್ಡಿ, ನರಸಿಂಹನಾಯಕ, ಕೆ.ಶರಣಪ್ಪ, ದದ್ದಲ ಬಸನಗೌಡ ಇದ್ದರು.

ಮೋದಿ ಉತ್ತರಿಸಲು ಆಗ್ರಹ: ‘ದೊಡ್ಡ ಮುಖಬೆಲೆಯ ನೋಟುಗಳ ಅಮಾನ್ಯದಿಂದ ಕಳೆದ ಒಂದು ವರ್ಷದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ಉತ್ತರ ನೀಡಬೇಕು’ ಎಂದು ಒತ್ತಾಯಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ನೋಟುಗಳ ಅಮಾನ್ಯದ ಸಂಪೂರ್ಣ ಜವಾಬ್ದಾರಿ ತಮ್ಮದೇ ಆಗಿದ್ದು, ನೋಟುಗಳ ಅಮಾನ್ಯದ ಉದ್ದೇಶ ಈಡೇರಿಸುವಲ್ಲಿ ವಿಫಲರಾದರೆ ಸಾರ್ವಜನಿಕವಾಗಿ ಶಿಕ್ಷಿಸಬಹುದು ಎಂದು ಹೇಳಿದ್ದ ಮಾತನ್ನು ಮೋದಿ ಅವರು ಮರೆತಿದ್ದಾರೆ’ ಎಂದು ದೂರಿದರು.

‘ನೋಟು ಅಮಾನ್ಯದಿಂದ ಅದೆಷ್ಟೊ ಜನರು ಉದ್ಯೋಗವನ್ನು ಕಳೆದುಕೊಂಡರು. ಸಣ್ಣ ವಾಣಿಜ್ಯ ಸಂಸ್ಥೆಗಳು ಕುಸಿಯುವ ಹಂತಕ್ಕೆ ತಲುಪಿವೆ. ರೈತರು ಹಾಗೂ ಕಾರ್ಮಿಕರು ಹೆಚ್ಚಿನ ತೊಂದರೆ ಅನುಭವಿಸಿದರು. ದೇಶದ ಅಭಿವೃದ್ಧಿಯೇ ಸ್ಥಗಿತಗೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತೀನ್‌ ಅನ್ಸಾರಿ, ಮಹಮ್ಮದ್‌ ಇಸ್ಮಾಯಿಲ್, ಶಫೀ, ಗೌಸ್‌, ಇರ್ಫಾನ್‌, ಫಾರೂಕ್‌, ತೌಸಿಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.