ADVERTISEMENT

ಪ್ರತಿಭಟನಾಕಾರರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 6:55 IST
Last Updated 2 ಸೆಪ್ಟೆಂಬರ್ 2017, 6:55 IST

ರಾಯಚೂರು: ವಜಾಗೊಂಡ ರಿಮ್ಸ್ ಆಸ್ಪತ್ರೆಯ 36 ಜನ ನರ್ಸಿಂಗ್ ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಂಡು ವೇತನ ಹೆಚ್ಚಳ ಮಾಡಬೇಕು. ಪ್ರಭಾರ ಡೀನ್ ಡಾ.ಕವಿತಾ ಪಾಟೀಲ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದ್ದರಿಂದ ಪೊಲೀಸರು ಅವರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಶುಕ್ರವಾರ ಐದನೇ ದಿನ ಪೂರೈಸಿತು. ಹೋರಾಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ನಡೆಸಿ ಪ್ರತಿಕೃತಿ ದಹನ ನಡೆಸಿದಾಗ ಟಿಯುಸಿಐ ರಾಜ್ಯ ಘಟಕ ಅಧ್ಯಕ್ಷ ಆರ್.ಮಾನಸಯ್ಯ, ಜಿ.ಅಮರೇಶ. ಜಿ.ಅಡವಿರಾವ್, ಹುಚ್ಚರೆಡ್ಡಿ ಹಾಗೂ ರಿಮ್ಸ್ ನರ್ಸಿಂಗ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದರು.

ಕಾರ್ಮಿಕರ ಹೋರಾಟಕ್ಕೆ ಸ್ಪಂದನೆ ನೀಡದ ಆಡಳಿತ ವರ್ಗ ನಿರ್ಲಕ್ಷ್ಯ ಧೋರಣೆ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಿಬ್ಬಂದಿ, ನೇಮಕ, ವೇತನ ಮತ್ತು ಬಡ್ತಿ ಬಗ್ಗೆ ತನಿಖೆ ನಡೆಸಬೇಕು. ಸಿ ಮತ್ತು ಡಿ ವರ್ಗದ ಕಾರ್ಮಿಕರಿಗೆ ನಿಗದಿತ ವೇತನ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರದ ಆದೇಶದಂತೆ ವೇತನ ಕೇಳಿದ 36 ಜನ ನರ್ಸಿಂಗ್ ಸಿಬ್ಬಂದಿಯನ್ನು ಮೌಖಿಕ ಆದೇಶದ ಮೂಲಕ ಪ್ರಭಾರಿ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರು ಹೊರಹಾಕಿದ್ದಾರೆ. ಆಸ್ಪತ್ರೆಯಲ್ಲಿ ಸಿ ಮತ್ತು ಡಿ ವರ್ಗದ ಸಿಬ್ಬಂದಿಗೆ ವೇತನ ಹಾಗೂ ಉದ್ಯೋಗದ ಭದ್ರತೆ ಇಲ್ಲವಾಗಿದೆ. ಆಸ್ಪತ್ರೆಯಲ್ಲಿ 250 ಸಿಬ್ಬಂದಿಯಿದ್ದು, ಶೇ 95ರಷ್ಟು ಸಿಬ್ಬಂದಿಗೆ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ದೂರಿದರು.

ಶೇ 5ರಷ್ಟು ಸಿಬ್ಬಂದಿ ಮಾತ್ರ ಡೀನ್ ಸುತ್ತಮುತ್ತ ಇದ್ದುಕೊಂಡು ಲಾಬಿ ಮಾಡಿ ಕೆಲಸ ಮಾಡದೆ ಹೆಚ್ಚಿನ ವೇತನ ಹಾಗೂ ದೊಡ್ಡ ಹುದ್ದೆ ಪಡೆದಿದ್ದಾರೆ. ಡೀನ್ ಸುತ್ತಮುತ್ತ ಇರುವವರು ಸಿಬ್ಬಂದಿ ಎಂಬುದನ್ನೇ ಮರೆತು ಆಡಳಿತಗಾರರಾಗಿದ್ದಾರೆ. ಬಸವರಾಜ ಸ್ವಾಮಿ ಎಂಬುವವರು ಗೆಜೆಟೆಡ್ ಅಧಿಕಾರಿಯೆಂದು ಹೇಳಿಕೊಂಡು ಆಡಳಿತ ನಡೆಸುತ್ತಿದ್ದಾರೆ.

ಮೇ.ದೀಪಾ ಸೋಲಾರ್ ಲೈಟಿಂಗ್ ಸಿಸ್ಟಮ್ ಬೆಂಗಳೂರು ಕಂಪೆನಿಯಿಂದ 1217 ಹೋಮ್ ಲೈಟ್ ಹಾಗೂ 89 ಸ್ಟ್ರೀಟ್ ಲೈಟ್ ₹1.27 ಕೋಟಿ ಮೊತ್ತದಲ್ಲಿ ಟೆಂಡರ್ ಮಾಡದೆ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಇವುಗಳಲ್ಲಿ ಒಂದೂ ಲೈಟ್ ಸಹ ಕೆಲಸ ಮಾಡುತ್ತಿಲ್ಲ. ಡಾ.ಕವಿತಾ ಪಾಟೀಲ ಹಾಗೂ ಅವರ ತಂಡ ಖರ್ಚು ಮಾಡಿರುವ ಹಣದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಘಟಕ ಯೋಜನೆ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗಿದೆ. ಮೂರೂವರೆ ವರ್ಷದಲ್ಲಿ ₹ 30 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಲಾಗಿದ್ದು, ಎಸ್ಸಿ/ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಯಾವುದೇ ಅರ್ಹತೆ ಇಲ್ಲದಿದ್ದರೂ ಡಾ.ಕವಿತಾ ಪಾಟೀಲ ಅವರನ್ನು ಪ್ರಭಾರ ಡೀನ್ ಮಾಡಲಾಯಿತು. ಪ್ರಭಾರ ಅವಧಿ ಆರು ತಿಂಗಳಾಗಿದ್ದರೂ ಅವರು ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರಭಾರ ಅಧಿಕಾರಿಗೆ ಸೀಮಿತ ಅಧಿಕಾರವಿದ್ದರೂ ಅಧಿಕಾರ ಮೀರಿ ಮಾಡಬಾರದ್ದನ್ನೆಲ್ಲ ಮಾಡಿಬಿಟ್ಟಿದ್ದಾರೆ ಎಂದು ಆರೋಪಿಸಿದರು.

ರಿಮ್ಸ್ ಆಸ್ಪತ್ರೆಯ ಪ್ರಸೂತಿ ವಿಭಾಗ ಬಾಣಂತಿಯರ ಬಲಿಪೀಠವಾಗಿದ್ದು, ಆಸ್ಪತ್ರೆಗೆ ಬಂದ ಬಾಣಂತಿಯರಲ್ಲಿ ಮೂವರಲ್ಲಿ ಒಬ್ಬರು ಸಾಯುತ್ತಿದ್ದಾರೆ. ₹26 ಕೋಟಿ ಹಣವಿದ್ದರೂ ಒಪೆಕ್ ಆಸ್ಪತ್ರೆ ಹಾಳಾಗಿದೆ. ಕವಿತಾ ಪಾಟೀಲ ಅವರನ್ನು ಅಮಾನತುಗೊಳಿಸಿ ಅರ್ಹರನ್ನು ಡೀನ್ ಸ್ಥಾನಕ್ಕೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.