ADVERTISEMENT

‘ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 6:07 IST
Last Updated 22 ಮೇ 2017, 6:07 IST

ರಾಯಚೂರು: ‘ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿಯಿಂದ ವಂಚಿತಗೊಂಡಿರುವ ವರ್ಗದವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತವೆ’ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಹೇಳಿದರು.

ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಹೆಳವ ಸಮಾಜ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಹೆಳವ ಸಮಾಜದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

‘ಹೆಳವ ಸಮಾಜದವರು ಇತರೆ ಸಮಾಜದವರೊಂದಿಗೆ ಸೌಹಾರ್ದಯುತ ವಾಗಿ ಜೀವನ ನಡೆಸುತ್ತಿದ್ದಾರೆ. ಸಮಾಜದ ಸಂಘಟನೆಗಾಗಿ ಸಮಾವೇಶ ಹಮ್ಮಿಕೊಂಡಿರುವುದು ಶ್ಲಾಘನೀಯ. ಸಮಾಜದ ಜಾತಿ ಪ್ರಮಾಣ ಪತ್ರ ಪಡೆಯಲು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗುವುದು’ ಎಂದರು.

ADVERTISEMENT

‘ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಎಲ್ಲ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಹೆಳವ ಸಮಾಜದ ಪ್ರಗತಿಗೆ ಕೂಡ ಅಗತ್ಯ ಸಹಕಾರ ನೀಡಲಿದೆ’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಹೆಳವ ಸಮಾಜ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಮಾಜವನ್ನು ಸರ್ಕಾರಗಳು ಗುರುತಿಸುವ ನಿಟ್ಟಿನಲ್ಲಿ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಹೆಳವ ಸಮಾಜದವರು ತಮ್ಮ ಮಕ್ಕಳಿಗೆ ಉತ್ತ ಶಿಕ್ಷಣ ಕೊಡಿಸಲು ಆದ್ಯತೆ ನೀಡಿದರೆ  ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾಜದ ಸಂಘಟನೆಗೆ ಮುಂದಾಗಿರುವ ನಾಗರಾಜು ಅವರಿಗೆ ಎಲ್ಲರೂ ಸಹಕಾರ ನೀಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಎಂ.ನಾಗರಾಜು ಮಾತನಾಡಿ, ‘ಸಮಾಜದಲ್ಲಿ ಹಿಂದುಳಿದಿರುವ ಜನರ ಏಳಿಗೆಗೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಮುಂದಾಗಬೇಕು’ ಎಂದು ಹೇಳಿದರು.

ತುಮಕೂರಿನ ಬಿ.ಕೋಡಿಹಳ್ಳಿಯ ಹೆಳವ ಸಮಾಜದ ಗುರುಪೀಠದ ಬಸವಬೃಂಗೇಶ್ವರ ಸ್ವಾಮೀಜಿ, ಬೀದರ್‌ನ ದಮ್ಮಸೂರು ಪೀಠದ ಶಂಕರಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಕರಿಯಪ್ಪ, ವೈ.ಡಿ.ವೆಂಕಟೇಶ, ವೈ.ಎನ್.ಶ್ರೀನಿವಾಸ ಪೋಗತಲ್, ಜಿಲ್ಲಾ ಘಟಕ ಅಧ್ಯಕ್ಷ ಅಶೋಕ, ದೊಡ್ಡಪ್ಪ ಏಗನೂರು, ರಾಮಣ್ಣ, ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಲ್.ಶ್ರೀನಿವಾಸ ಇದ್ದರು.

ಮೆರವಣಿಗೆ: ಸಮಾವೇಶದ ನಿಮಿತ್ತ ಕುಲದೇವರು ಮುಕ್ತಿನಾಥಯ್ಯ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಬಸವೇಶ್ವರ ವೃತ್ತದಿಂದ ರಂಗಮಂದಿರದವರೆಗೆ ವಿಜೃಂಭಣೆಯಿಂದ ನಡೆಯಿತು. ಕಲಾ ತಂಡಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.