ADVERTISEMENT

ಬಸ್‌ ಸೌಲಭ್ಯ ಕಾಣದ ಪಾತಾಪುರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:04 IST
Last Updated 23 ಮೇ 2017, 7:04 IST
ಕವಿತಾಳ ಸಮೀಪದ ಪಾತಾಪುರ ಗ್ರಾಮದ ಚರಂಡಿಯಲ್ಲಿ ಕೊಳಚೆ ಸಂಗ್ರಹಗೊಂಡಿರುವುದು
ಕವಿತಾಳ ಸಮೀಪದ ಪಾತಾಪುರ ಗ್ರಾಮದ ಚರಂಡಿಯಲ್ಲಿ ಕೊಳಚೆ ಸಂಗ್ರಹಗೊಂಡಿರುವುದು   

ಕವಿತಾಳ: ಸಮೀಪದ ಪಾತಾಪುರ ಗ್ರಾಮದಲ್ಲಿ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ, ಶೌಚಾಲಯ ಇಲ್ಲ. ದಶಕ ಗಳಿಂದ ಬಸ್‌ ಸೌಕರ್ಯವೂ ಇಲ್ಲ. ಇದರಿಂದ ಗ್ರಾಮಸ್ಥರು ಪರ ದಾಡುವಂತಾಗಿದೆ.

‘ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾತಾಪುರ ಗ್ರಾಮದಲ್ಲಿ 800 ಜನಸಂಖ್ಯೆ ಇದ್ದು, ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ರಾಯ ಚೂರು ಲಿಂಗಸುಗೂರು ರಾಜ್ಯ ಹೆದ್ದಾರಿ ಯಿಂದ ಗ್ರಾಮಕ್ಕೆ 1.5 ಕಿ.ಮೀ. ದೂರವಿದೆ. ಆದರೂ ಸಮರ್ಪಕ ಬಸ್‌ ಸೌಲಭ್ಯ ಇಲ್ಲ. ದಶಕ ಕಳೆದರೂ ಇದುವರೆಗೆ ಗ್ರಾಮಕ್ಕೆ ಬಸ್‌ ಬಂದಿಲ್ಲ. ಇದರಿಂದ ಗ್ರಾಮಸ್ಥರು ಟಂಟಂ ಇಲ್ಲವೇ ಕಾಲ್ನಡಿಗೆಯಲ್ಲಿಯೇ  ಪಟ್ಟಣಕ್ಕೆ ಹೋಗುವ ಅನಿವಾರ್ಯತೆ ಇದೆ’ ಎಂದು ಗ್ರಾಮಸ್ಥರು ಹೇಳುತ್ತಾರೆ.

‘ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಬಹುತೇಕ ಹದ ಗೆಟ್ಟಿದೆ. ಬೈಕ್‌ ಸವಾರರು ತೊಂದರೆ ಎದುರಿಸುವಂತಾಗಿದೆ. ಗ್ರಾಮದ ಬಹುತೇಕ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಸಿಸಿ ರಸ್ತೆಯೂ ಇಲ್ಲ. ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತದೆ.

ADVERTISEMENT

ಗ್ರಾಮದಲ್ಲಿ ಹಂದಿಗಳ, ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ರೋಗ ಭೀತಿ ಎದುರಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಹೋಬಳಿ ಘಟಕದ ದೇವರಾಜ ದೂರುತ್ತಾರೆ.

‘ಕೆಲವು ಕಡೆ ಸಿಸಿ ರಸ್ತೆ ನಿರ್ಮಿಸಿದ್ದರೂ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಸಾಮೂಹಿಕ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಬಯಲು ಬಹಿರ್ದೆಸೆ ಅನಿವಾರ್ಯ ಎನ್ನುವಂತಾಗಿದೆ.

ಜಿಲ್ಲಾ ಪಂಚಾಯಿತಿ ವತಿಯಿಂದ ಸಮರ್ಪಕವಾಗಿ ಅನು ದಾನ ವಿತರಣೆಯಾಗದ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಿಸಿ ಕೊಳ್ಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ಮಲ್ಲಯ್ಯ.

‘ಪಟ್ಟಣಗಳಿಗೆ ಶಾಲಾ ಕಾಲೇಜು ಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆ ಇನ್ನಿತರ ತುರ್ತು ಕೆಲಸಗಳಿಗೆ ತೆರಳಬೇಕಾದರೆ ಬಸ್‌ ಸೌಕರ್ಯ ಇಲ್ಲ. ಇದರಿಂದ ಅನಿವಾರ್ಯ ಸಂದರ್ಭ ಗಳಲ್ಲಿ ಗ್ರಾಮಸ್ಥರು ಪರದಾಡು ವಂತಾಗಿದೆ’ ಎನ್ನುತ್ತಾರೆ ಅವರು.

‘ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು, ಚರಂಡಿ ವ್ಯವಸ್ಥೆ ಸರಿಪಡಿಸಬೇಕು, ಅಗತ್ಯ ವಿರುವಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ, ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ  ರಮೇಶ, ಬಸವರಾಜ ಮತ್ತು ರಾಜು ಒತ್ತಾಯಿಸುತ್ತಾರೆ.  

* * 

ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ  ಕ್ರಮ ಕೈಗೊಂಡಿಲ್ಲ. ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ನಡೆಸಲಾಗುವುದು
ವೆಂಕಟೇಶ ಶಂಕ್ರಿ
ದೇವತಗಲ್ ನಿವಾಸಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.