ADVERTISEMENT

‘ಬಿಜೆಪಿ ಸಾಧನೆ ಜನರಿಗೆ ತಲುಪಿಸಿ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:33 IST
Last Updated 14 ಜುಲೈ 2017, 6:33 IST

ಮಾನ್ವಿ: ‘ಬಿಜೆಪಿ ಪಕ್ಷಕ್ಕೆ ಮುಖಂಡರಿಗಿಂತ ಕಾರ್ಯಕರ್ತರು ಆಧಾರ ಸ್ತಂಭ. ಕಾರಣ ತಳಮಟ್ಟದಿಂದ ಪಕ್ಷದ ಸಂಘಟನೆಗಾಗಿ ವಿಸ್ತಾರಕರ ಯೋಜನೆಯನ್ನು ಜಾರಿಗೊಳಿಸಲಾಗಿದೆ’ ಎಂದು  ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಗುರುವಾರ ತಾಲ್ಲೂಕಿನ ಪೋತ್ನಾಳ ಗ್ರಾಮದ ಹುಚ್ಚಬುಡ್ಡೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಬಿಜೆಪಿ ಶಕ್ತಿ ಕೇಂದ್ರದಿಂದ ಆಯೋಜಿಸಿದ್ದ ವಿಸ್ತಾರಕರ ಬಹಿರಂಗ ಸಭೆ ಉದ್ಘಾಟಿಸಿ  ಮಾತನಾಡಿದರು.

‘ಪ್ರಧಾನಿ ಮೋದಿ ಅವರು 3 ವರ್ಷದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಳು ಹಾಗೂ ದೇಶದ ಪ್ರಗತಿಗಾಗಿ ಕೈಗೊಳ್ಳುತ್ತಿರುವ ದೂರದೃಷ್ಠಿ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಲು ಮತ್ತು  ಬಿಜೆಪಿಯನ್ನು ಬೂತ್ ಮಟ್ಟದಿಂದ ಸಧೃಡಗೊಳಿಸಲು ವಿಸ್ತಾರಕರು ಶ್ರಮಿಸಬೇಕು.

ಪ್ರತಿ ಮನೆ ಮನೆಗಳಿಗೆ ತೆರಳಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 47 ಲಕ್ಷ ಮನೆಗಳ ನಿರ್ಮಾಣ, ದೀನದಯಾಳ್ ಗ್ರಾಮೀಣ ಕೌಶಲ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ, ವಿದ್ಯುತ್ ಸಂಪರ್ಕ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ, ಜನಧನ್,  ಸ್ವಚ್ಛ ಭಾರತ ಅಭಿಯಾನ, ಹೆದ್ದಾರಿಗಳ ನಿರ್ಮಾಣ, ಪ್ರಧಾನಮಂತ್ರಿ ಉಜ್ವಲ ಯೋಜನೆ ಮತ್ತಿತರ ಯೋಜನೆಗಳ ಅರಿವು ಮೂಡಿಸಬೇಕು’ ಎಂದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಂಡಿರುವ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ, ಸಂಧ್ಯಾಸುರಕ್ಷಾ, ಭಾಗ್ಯಲಕ್ಷ್ಮೀ ಯೋಜನೆಗಳು ಸೇರಿದಂತೆ ಇನ್ನಿತರ ಅಭಿವೃದ್ದಿ ಕಾರ್ಯಗಳ ಕುರಿತು ಪ್ರಚಾರ ಮಾಡಬೇಕು. ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ಜನತೆಗೆ ಮನದಟ್ಟು ಮಾಡಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರನಾಯಕ, ಬಿಜೆಪಿ ತಾಲೂಕು ಘಟಕದ ಧ್ಯಕ್ಷ ಶರಣಪ್ಪಗೌಡ ನಕ್ಕುಂದಿ, ಜಿಲ್ಲಾ ಉಪಾಧ್ಯಕ್ಷ ಮಲ್ಲನಗೌಡ ನಕ್ಕುಂದಿ, ತಾಲ್ಲೂಕು ಪ್ರಧಾನಕಾ ಕಾರ್ಯದರ್ಶಿ ಮಲ್ಲಿಕಾರ್ಜುನ ಜಕ್ಕಲದಿನ್ನಿ, ವಸಂತ ಕೊಡ್ಲಿ ಮಾತನಾಡಿದರು.

ಬಿಜೆಪಿ ಮುಖಂಡರಾದ ಬಸವರಾಜನಾಯಕ ಕೆ.ಗುಡದಿನ್ನಿ, ಉಮೇಶ ಸಜ್ಜನ್, ಮಠದಪ್ಪ ನಾಯ್ಕರ್, ಖಾನ್‍ಸಾಬ್ ಪೋತ್ನಾಳ್, ನವೀನ್ ನಾಡಗೌಡ, ಕೆ.ಎಸ್.ಕುಮಾರಸ್ವಾಮಿ, ವಿರೂಪಾಕ್ಷಿ ಹೂಗಾರ ಬ್ಯಾಗವಾಟ,  ಅಶೋಕಸ್ವಾಮಿ,  ಮೌಲಾಸಾಬ್ ಗಣದಿನ್ನಿ, ಗ್ರಾ.ಪಂ.ಅಧ್ಯಕ್ಷ ಈರಣ್ಣ ಪೋತ್ನಾಳ್, ಶಿವರಾಜ್ ಸಂಗಾಪುರ, ಅಯ್ಯಪ್ಪನಾಯಕ ಮ್ಯಾಕಲ್, ನಾಗೇಶ್ವರರಾವ್, ಈರಣ್ಣನಾಯಕ, ಶೇಖರಪ್ಪ ಪೋತ್ನಾಳ, ಶಿವಲಿಂಗಯ್ಯಸ್ವಾಮಿ, ಶರಣಪ್ಪ ಪೋತ್ನಾಳ್, ತಿರುಪತಿನಾಯಕ, ಯಲ್ಲಪ್ಪ ಇದ್ದರು.

ಸಹಾಯಧನ: ಪೋತ್ನಾಳ್ ಗ್ರಾಮದಲ್ಲಿ ಈಚೆಗೆ ಹಾವು ಕಚ್ಚಿ ಮೃತಪಟ್ಟ ಬಾಲಕ ಪ್ರಜ್ವಲ್ ಕುಟುಂಬಕ್ಕೆ ಸಾಂತ್ವನ  ಹೇಳಿದ ಬಿಜೆಪಿ ಮುಖಂಡರು ₹10ಸಾವಿರ ಸಹಾಯಧನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.