ADVERTISEMENT

ಬಿಳಿ ಜೋಳದ ಮೇವಿಗೆ ಎಲ್ಲೆಡೆ ಬೇಡಿಕೆ

ಸ್ಥಳೀಯವಾಗಿ ಜಾನುವಾರುಗಳಿಗೆ ಮೇವಿಲ್ಲದೆ ಹಾಹಾಕಾರ: ಇನ್ನೊಂದೆಡೆ ಅಕ್ರಮ ಸಾಗಣೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:13 IST
Last Updated 29 ಆಗಸ್ಟ್ 2015, 7:13 IST

ಲಿಂಗಸುಗೂರು: ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ ಕೈಕೊಟ್ಟಿದ್ದರಿಂದ ತಾಲ್ಲೂಕಿನಲ್ಲಿ ಬರಗಾಲದ ಕರಿನೆರಳು ಆವರಿಸಿಕೊಂಡಿದೆ. ಕೂಲಿಕಾರರು ಗುಳೆ ಹೋಗುವುದು ಸಾಮಾನ್ಯವಾಗಿದೆ. ಜಾನುವಾರುಗಳು ಕುಡಿಯುವ ನೀರಿನ ಕೊರತೆಯಿಂದ ಪರದಾಡುವಂತಾಗಿದೆ. ತಾಲ್ಲೂಕಿನಾದ್ಯಂತ ಬಿಳಿ ಜೋಳದ ಸೊಪ್ಪೆ (ಮೇವು)ಗೆ ಭಾರಿ ಬೇಡಿಕೆ ಕಂಡು ಬಂದಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ 67075 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆ. 20ರೊಳಗೆ ವಾಡಿಕೆಯಂತೆ 245ಮಿ.ಮೀ. ಮಳೆ ಬರಬೇಕಿತ್ತು. ಆದರೆ 37.71ಮಿ.ಮೀ ಮಳೆ ಬಿದ್ದಿದೆ. ಕೇವಲ 23683 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆ ಪೈಕಿ 17939 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದನ್ನು ಕೃಷಿ ಇಲಾಖೆ ಖಚಿತಪಡಿಸಿದೆ.

ನಾರಾಯಣಪುರ ಬಲದಂಡೆ ನಾಲೆ, ರಾಂಪೂರ–ನವಲಿ ಜಡಿಶಂಕರಲಿಂಗ ಏತ ನೀರಾವರಿ ಹಾಗೂ ಮಸ್ಕಿ (ಘನಮಠೇಶ್ವರ) ನಾಲಾ ಅಚ್ಚುಕಟ್ಟು ಪ್ರದೇಶಕ್ಕೆ ರೈತರ ಬೇಡಿಕೆಗೆ ಅನುಗುಣವಾಗಿ ನೀರು ಹರಿಸುವ ಕನಸು ಭಗ್ನಗೊಂಡಂತಾಗಿದೆ. ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಕೊರತೆ ಇದೆ.

ಕಳೆದ ವರ್ಷ ಸಂಗ್ರಹಿಸಿಟ್ಟುಕೊಂಡಿದ್ದ ಬಿಳಿಜೋಳ ಮತ್ತು ಮುಂಗಾರಿ ಜೋಳದ ಸೊಪ್ಪೆಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾಮಾನ್ಯ ದಿನಗಳಲ್ಲಿ ಮೇವಿನ ಕಟ್ಟೊಂದಕ್ಕೆ ₨ 100ರಿಂದ 150 ಇರುತ್ತದೆ. ಸದ್ಯ ಕಟ್‌ವೊಂದಕ್ಕೆ ₨ 500ರಿಂದ 600 ನೀಡಿದರೂ ಮೇವು ಸಿಗುತ್ತಿಲ್ಲ. ಹೊರ ರಾಜ್ಯ ಮತ್ತು ಜಿಲ್ಲೆಯವರು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ ಎಂದು ರೈತ ಸದ್ಯೋಜಾತಪ್ಪ ವಿವರಿಸಿದರು.

ತಾಲ್ಲೂಕಿನ ಸರ್ಜಾಪುರ, ಗುಡದನಾಳ, ಆಮದಿಹಾಳ, ಬನ್ನಿಗೋಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಗಡಿ ತಾಲ್ಲೂಕು ಗ್ರಾಮಗಳಿಂದ ಲಾರಿಯೊಂದಕ್ಕೆ (ಅಂದಾಜು 55ರಿಂದ 60 ಕಟ್‌) ₨ 35 ಸಾವಿರ ಹಣ ನೀಡಿ ಖರೀದಿಸಿ ಕಲಬುರ್ಗಿ, ಶಹಪುರ, ಹೊರ ರಾಜ್ಯದ ಸೊಲ್ಲಾಪುರಕ್ಕೆ ಲಿಂಗಸುಗೂರು ಮಾರ್ಗವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ರೈತ ಸಂಘಟನೆ ಆರೋಪಿಸಿದೆ.

ಬರಗಾಲ ಘೋಷಣೆ ನಿಮಿತ್ತ ಪಶು ಪಾಲನ ಮತ್ತು ಪಶು ವೈದ್ಯ ಇಲಾಖೆ ತಾಲ್ಲೂಕಿನ 108673 ಜಾನುವಾರುಗಳಿಗೆ ದಿನಕ್ಕೆ 8 ಕೆ.ಜಿ ಮೇವಿನಂತೆ ಪ್ರತಿ ದಿನಕ್ಕೆ 869 ಮೆಟ್ರಿಕ್‌ ಟನ್‌ ಮೇವು ಬೇಕಾಗುತ್ತದೆ.  ತಿಂಗಳಿಗೆ 24343 ಮೆಟ್ರಿಕ್‌ ಟನ್‌ ಮೇವಿನ ಅವಶ್ಯಕತೆ ಇದ್ದು ತಾಲ್ಲೂಕಿನ ಎರಡು ಭಾಗದಲ್ಲಿ ಮೇವಿನ ಬ್ಯಾಂಕ್‌ ಸ್ಥಾಪನೆ ಮಾಡುವಂತೆ ಶಿಫಾರಸು ಮಾಡಿದೆ.

ಅಕ್ಕಪಕ್ಕದ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೆ ಕಂದಾಯ ಇಲಾಖೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮೇವು ಸಾಗಣೆ ನಿರಾತಂಕವಾಗಿ ನಡೆದಿದೆ. ಅಕಾಲಿಕ ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಹಣದ ಆಸೆಗೆ ಮೇವು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು. ಹೊರ ಜಿಲ್ಲೆ ಮತ್ತು ರಾಜ್ಯಕ್ಕೆ ಅಕ್ರಮ ಸಾಗಣೆ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮರಯ್ಯಸ್ವಾಮಿ ಒತ್ತಾಯಿಸಿದ್ದಾರೆ.
***
ತಾಲ್ಲೂಕಿನಲ್ಲಿ ಮೇವಿನ ಅಭಾವ ನೀಗಿಸಲು ಮೇವು ಬ್ಯಾಂಕ್‌ ಸ್ಥಾಪಿಸಲಾಗುವುದು. ಅಕ್ರಮ ಸಾಗಣೆ  ತಡೆಗೆ ಕ್ರಮ ಕೈಗೊಳ್ಳಲಾಗುವುದು.
-ಶ್ರೀನಿವಾಸಮೂರ್ತಿ,
ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.