ADVERTISEMENT

ಭತ್ತಕ್ಕೆ ಇಲ್ಲ ಮಾರುಕಟ್ಟೆ: ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:49 IST
Last Updated 12 ಜನವರಿ 2017, 10:49 IST
ಜಾಲಹಳ್ಳಿ ಪಟ್ಟಣದ ಸುತ್ತಮುತ್ತನ ಹಳ್ಳಿಗಳಲ್ಲಿ ರೈತರು ಬೆಳೆದ ಭತ್ತ ಮಾರಾಟ ಆಗದೇ ಇರುವುದರಿಂದ ರಾಶಿ ಮಾಡಿರುವುದು
ಜಾಲಹಳ್ಳಿ ಪಟ್ಟಣದ ಸುತ್ತಮುತ್ತನ ಹಳ್ಳಿಗಳಲ್ಲಿ ರೈತರು ಬೆಳೆದ ಭತ್ತ ಮಾರಾಟ ಆಗದೇ ಇರುವುದರಿಂದ ರಾಶಿ ಮಾಡಿರುವುದು   

ಜಾಲಹಳ್ಳಿ: ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ಇಲ್ಲದೇ ರಾಶಿ ಮಾಡಿಕೊಂಡು ಸೂಕ್ತ ಬೆಲೆಗಾಗಿ ಕಾಯುತ್ತಿದ್ದಾರೆ.
ಸಾವಿರಾರು ಎಕರೆ ಪ್ರದೇಶದಲ್ಲಿ ಜಾಲಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮಿಗೆ ನಾರಾಯಣಪುರ ಬಲದಂಡೆ ಕಾಲುವೆಯ ನೀರು ಪಡೆದುಕೊಂಡು ಬೆಳೆದ ಭತ್ತಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಸೂಕ್ತ ಬೆಲೆ ಇಲ್ಲದೇ ರೈತರು ತಾವು ಬೆಳೆದ ಭತ್ತದ ರಾಶಿ ನೋಡಿ ಕಾಲ ಕಳೆಯುವಂತಾಗಿದೆ.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಕೃಷಿ ಮಾರುಕಟ್ಟೆ ಇದ್ದು ಇಲ್ಲವಾಗಿದೆ. ಹೆಸರಿಗೆ ಮಾತ್ರ ಕಟ್ಟಡ ನಿರ್ಮಾಣವಾಗಿದೆ. ಅಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಕೂಡ  ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಇರುವುದರಿಂದ ರೈತರು ಬೆಳೆದ ಭತ್ತಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ಪ್ರಾರಂಭದಲ್ಲಿ  75 ಕೆ.ಜಿ ಭತ್ತಕ್ಕೆ  ₹1,300ರಂತೆ ದಲ್ಲಾಳಿಗಳು ಮಾತ್ರ ಖರೀದಿ ಮಾಡಿ ತಮ್ಮಗೆ ಬೇಕಾಗುವಷ್ಟು ಲಾರಿಗಳಲ್ಲಿ ತುಂಬಿಕೊಂಡು ಸಾಗಣೆ ಮಾಡಿಕೊಂಡಿದ್ದಾರೆ. ಅದರೆ, ಎಲ್ಲಾ ರೈತರ ಫಸಲು ಒಂದೇ ಸಮಯಕ್ಕೆ ಬಾರದೇ ಸ್ವಲ್ಪ ತಡವಾಗಿ ನಾಟಿ ಮಾಡಿದ ರೈತರ ಬೆಳೆ ಈಗ ರಾಶಿ ಮಾಡಲು ಪ್ರಾರಂಭವಾಗಿದೆ. ಕೆಲ ರೈತರು ಬೇಗ ಕಟಾವು ಮಾಡಿ ಭತ್ತ ಮಾರಾಟಕ್ಕೆ ರೈತರು ಮುಂದಾದರೂ ಸಹ ದಲ್ಲಾಳಿಗಳು ಖರೀದಿ ಮಾಡಲು ಯಾರು ಬಾರದೇ ಇರುವುದರಿಂದ ರಾಶಿ ನೋಡಿ ಕಾಲ ಕಳೆಯುವಂತಾಗಿದೆ. 

ಈಚೆಗೆ ಪ್ರಧಾನಿ ಮಾಡಿರುವ ನೋಟು ಅಮಾನ್ಯದಿಂದಾಗಿ ಖರೀದಿದಾರರು ರೈತರಿಗೆ ಚೆಕ್‌ ನೀಡಿ ಖರೀದಿಸಿದರೂ ಸಹ ಖಾತೆಗೆ ಜಮೆ ಹಾಗಲು 15ರಿಂದ 20 ದಿನಗಳು ಬೇಕಾಗಿದೆ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೇಡಿಕೆ ಇಲ್ಲದಾಗಿದ್ದು, ಪ್ರತಿ ಕ್ವಿಂಟಲ್‌ ಭತ್ತಕ್ಕೆ  ₹1,700 ಕ್ಕಿಂತಲೂ ಕಡಿಮೆ ದರದಲ್ಲಿ ಭತ್ತವನ್ನು ಕೇಳಲಾಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ಸಾಗಿಸಲು ರೈತರು ಹಿಂದೇಟು ಹಾಕುತ್ತಿದ್ದು , ಹಗಲು -ರಾತ್ರಿ ರಾಶಿ ಬಳಿಯೇ ರೈತರು ವಾಸ ಮಾಡುತ್ತಿದ್ದಾರೆ.

ಒಣಗಿದ ಭತ್ತವನ್ನು ಬರ್ಕಗಳ ಮೂಲಕ ಭದ್ರವಾಗಿ ಮುಚ್ಚಿಡಲಾಗಿದೆ. ಬಹುತೇಕ ವರ್ತಕರು, ದಲ್ಲಾಳಿಗಳು ರಾಶಿ ಸ್ಥಳಕ್ಕೆ ತೆರಳಿ ವಹಿವಾಟು ನಡೆಸಲು ಯತ್ನಿಸುತ್ತಿದ್ದು, ಬೆಲೆ ಮಾತ್ರ ಕಡಿಮೆ ಇದೆ ಎಂದು ಹೇಳಿ ಹೋಗುವುದು ಸಾಮಾನ್ಯವಾಗಿದೆ. ಬೆಳೆ ಉಳಿಸಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿದರೆ, ದರ ಇಲ್ಲದ ಸ್ಥಿತಿ. ಹೀಗಾಗಿ ಸಣ್ಣ ಮತ್ತು ಆತಿ ಸಣ್ಣ ರೈತರು ಭತ್ತ ಸಂಗ್ರಹಿಸಿಟ್ಟುಕೊಳ್ಳಲೂ ಆಗುತ್ತಿಲ್ಲ. ಪಟ್ಟಣದಲ್ಲಿ ಎಪಿಎಂಸಿ ಕೇಂದ್ರ ಇದ್ದರೂ ಅಧಿಕಾರಿ ಇಲ್ಲದೇ ಪಾಳು ಬಿದ್ದಿದೆ. ತಕ್ಷಣವೇ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು  ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.