ADVERTISEMENT

ಭರವಸೆಗಳ ಈಡೇರಿಕೆ: ಸಂಸದ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:29 IST
Last Updated 20 ಮಾರ್ಚ್ 2017, 8:29 IST

ರಾಯಚೂರು: ಚುನಾವಣೆ ಸಂದರ್ಭ ಜನರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಈಡೇರಿಸಿದ್ದಾರೆ.  ಹೈದರಾಬಾದ್‌ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ₹1,500 ಕೋಟಿ ಮೀಸಲಿಟ್ಟಿದ್ದಾರೆ ಎಂದು ಸಂಸದ ಬಿ.ವಿ.ನಾಯಕ್‌ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಈ ಭಾಗದ ಸಂಸದರು, ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು.  ಅದರಂತೆ ಹಣ ಕೊಟ್ಟಿದ್ದಾರೆ ಎಂದು ತಿಳಿಸಿದರು.

‘ಈ ಭಾಗದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ರಾಯಚೂರಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಘೋಷಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾಲ್ಕು ತಾಲ್ಲೂಕುಗಳನ್ನು ಘೋಷಿಸಿದ್ದಾರೆ.  ರಾಯಚೂರಿನಲ್ಲಿ ಸಿರವಾರ, ಮಸ್ಕಿ, ಯಾದಗಿರಿಯಲ್ಲಿ ಹುಣಸಗಿ, ವಡಗೇರಾ ತಾಲ್ಲೂಕು ಮಾಡಿದ್ದಾರೆ ಎಂದರು.

ಕೆಂಭಾವಿ ತಾಲ್ಲೂಕು ಮಾಡಬೇಕು ಎನ್ನುವ ಪ್ರಸ್ತಾಪ ಇದೆ. ಸ್ಥಳೀಯ ಮುಖಂಡರೊಂದಿಗೆ ಸೇರಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ  ಮಾತನಾಡಲಾಗುವುದು ಎಂದು ಹೇಳಿದರು.

ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಆಧುನೀಕರಣಕ್ಕಾಗಿ ₹800 ಕೋಟಿ ಮೀಸಲಿಟ್ಟಿದ್ದಾರೆ. ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಹೆಚ್ಚು ಅನುದಾನ ಬಂದಿರುವುದರಿಂದ ಸಹಜವಾಗಿ ರಾಯಚೂರಿಗೂ ಹೆಚ್ಚಿನ ಅನುದಾನ ದೊರೆಯಲಿದೆ. ಹಿಂದುಳಿದ ತಾಲ್ಲೂಕುಗಳು ಮಾನದಂಡ ಆಧರಿಸಿ ಅನುದಾನ ಸಿಗುತ್ತದೆ ಎಂದರು.

ರಾಜ್ಯ ಹೆದ್ದಾರಿಗಳ ಸಂಖ್ಯೆ 20 ಹಾಗೂ 23ನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಡಿಪಿಆರ್‌ ಟೆಂಡರ್‌ ಆಗಿದೆ. ಜನರ ಅನುಕೂಲಕ್ಕಾಗಿ ರಸ್ತೆಗಳನ್ನು ವಿಸ್ತರಿಸುವುದು ಹಾಗೂ ಮೇಲ್ದರ್ಜೆಗೆ ಏರಿಸುವುದು ಅಗತ್ಯ. ಹೊಸ ರಸ್ತೆಗಳಲ್ಲಿ ಟೋಲ್‌ ಸಂಗ್ರಹವನ್ನು ಜನರು ವಿರೋಧಿಸಿದರೆ, ಜನರ ಅಭಿಮತವನ್ನು ಸರ್ಕಾರಕ್ಕೆ ತಲುಪಿಸುತ್ತೇನೆ ಎಂದು ಹೇಳಿದರು.

ಸಂಸದರ ಆದರ್ಶ ಗ್ರಾಮ ವೆಂಕಟಾಪುರಕ್ಕೆ ಈಚೆಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಲಾಗಿದೆ. ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ಹಾಸ್ಟೆಲ್‌ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ಮಾಡುವುದಕ್ಕೆ ಯೋಜಿಸಲಾಗಿದೆ. ಸಂಸದರ ಅಬಿವೃದ್ಧಿ ನಿಧಿ ₹15 ಕೋಟಿ ಇದೆ. ಅದರಲ್ಲಿ 7.5 ಕೋಟಿ ವೆಚ್ಚವಾಗಿದೆ. ಮತ್ತೆ ₹5 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.