ADVERTISEMENT

ಮಂದಗತಿಯಲ್ಲಿ ಆರ್‌ಟಿಪಿಎಸ್ ಬ್ಯಾರೇಜ್ ಕಾಮಗಾರಿ

ಗರ್ಜಾಪುರ: ನೀರಿನ ಕೊರತೆ ತಪ್ಪಿಸಲು ಕಾಮಗಾರಿ

ಉಮಾಪತಿ ಬಿ.ರಾಮೋಜಿ
Published 13 ಜುಲೈ 2017, 6:37 IST
Last Updated 13 ಜುಲೈ 2017, 6:37 IST

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಉತ್ಪಾದನಾ ಘಟಕಗಳ ನಿರ್ವಹಣೆಗಾಗಿ ನೀರಿನ ಕೊರತೆ ನೀಗಿಸಲು ಗುರ್ಜಾಪುರ ಬಳಿ ನಡೆಯುತ್ತಿರುವ ಬ್ಯಾರೇಜ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.

ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗಬಾರದು ಎಂಬ ಉದ್ದೇಶದಿಂದ ಸಮೀಪದ ಗುರ್ಜಾಪುರ ಬಳಿ 0.46 ಟಿಎಂಸಿ ಅಡಿ ನೀರು ಸಂಗ್ರಹಿಸುವ ನಿಟ್ಟಿನಲ್ಲಿ 1,170 ಮೀಟರ್ ಉದ್ದ, 5,675 ಮೀಟರ್ ಎತ್ತರದ ಬ್ಯಾರೇಜ್ ನಿರ್ಮಿಸಿ ಅದಕ್ಕೆ 194 ಗೇಟ್ ಗಳನ್ನು ಅಳವಡಿಸುವ ಯೋಜನೆ ಜನವರಿ 28, 2015 ರಂದು ಕಾಮಗಾರಿ ಆರಂಭವಾಗಿತ್ತು.

ಬೆಂಗಳೂರು ಮೂಲದ ರಘು ಇನ್ಫ್ರಾ ಖಾಸಗಿ ಲಿಮಿಟೆಡ್  ಕಂಪೆನಿ ಗುತ್ತಿಗೆ ವಹಿಸಿಕೊಂಡಿದೆ. ₹120 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಳಿಸಲು  ಎರಡು ವರ್ಷ ಕಲಾವಕಾಶ ನೀಡಿದ್ದರಿಂದ ಕಂಪೆನಿ ಮುಖ್ಯಸ್ಥರು ತ್ವರಿತಗತಿಯಲ್ಲಿ ಕೆಲಸ ಕೈಗೆತ್ತಿಕೊಂಡಿದ್ದರು.ಆದರೆ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ.

ADVERTISEMENT

ಕಳೆದ ವರ್ಷ ನದಿ ಪಾತ್ರದ ಮೇಲ್ಭಾಗದಲ್ಲಿ ಹೆಚ್ಚಿನ ಮಳೆ ಆಗಿದ್ದರಿಂದ ನಾರಾಯಣಪುರ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಕಳೆದ ಎರಡು ತಿಂಗಳವರೆಗೆ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಬೇಸಿಗೆಯಲ್ಲಿ ವಿದ್ಯುತ್ ಘಟಕಗಳಿಗೆ ನೀರಿನ ತೊಂದರೆ ಆಗದಂತೆ ನೀರಿನ್ನು ಸಂಗ್ರಹಿಸುವುದು ಬ್ಯಾರೇಜ್ ನಿರ್ಮಾಣದ ಉದ್ದೇಶ.

‘ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಅರ್ಧದಷ್ಟು ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. 2017 ಜನವರಿ 28 ರೊಳಗೆ ಕೆಲಸ ಮುಗಿಯಬೇಕು. ಆದರೆ, ಈ ವರ್ಷ ಕೂಡ ಬ್ಯಾರೇಜ್‌ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನದಿಯಲ್ಲಿ ನೀರಿನ ಹರಿವು ಹೆಚ್ಚಳ ಆಗುವ ಸಾಧ್ಯತೆ ಇರುವುದರಿಂದ ಬಿಹಾರದ ಕಾರ್ಮಿಕರು ಕೆಲಸ ಬಿಟ್ಟು ಹೋಗಿದ್ದಾರೆ’ ಎಂದು ಕಾರ್ಮಿಕ ಸುರೇಶ ಹೇಳುತ್ತಾರೆ.

‘ಸದ್ಯ ಸ್ಥಳೀಯ ಕಾರ್ಮಿಕರು ಕಾಮಗಾರಿ ಕೈಗೊಂಡಿದ್ದಾರೆ. ಹಲವು ಕಾರಣಗಳಿಂದ ಮಂದಗತಿಯಲ್ಲಿ ಕೆಲಸ ನಡೆಯುತ್ತಿದೆ. ಒಂದು ವೇಳೆ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದರೆ ಬ್ಯಾರೇಜ್‌ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮುಗಿಯದಿದ್ದರೆ ಬರುವ ಬೇಸಿಗೆಯಲ್ಲಿ ಮತ್ತೆ ಆರ್‌ಟಿಪಿಎಸ್ ನೀರಿನ ಕೊರತೆ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.
–ಉಮಾಪತಿ.ಬಿ.ರಾಮೋಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.