ADVERTISEMENT

ಮಳೆ ಕೊರತೆ: ಒಣಗುತ್ತಿರುವ ಬೆಳೆ

ಬರದ ಛಾಯೆ; ಶಕ್ತಿನಗರ ಭಾಗದ ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 7:34 IST
Last Updated 11 ಜುಲೈ 2017, 7:34 IST

ಶಕ್ತಿನಗರ: ಸಮರ್ಪಕ ಮಳೆಯಾಗದ ಕಾರಣ ರೈತರು ಆತಂಕ ಎದುರಿಸುವಂತಾಗಿದೆ.

‘ಈ ವರ್ಷ ಸರಿಯಾಗಿ ಮಳೆ–ಬೆಳೆಯಾಗುವುದು ಎಂಬ ನಿರೀಕ್ಷೆಯ ಇತ್ತು. ಆದರೆ, ಬರದ ಛಾಯೆ ಎಲ್ಲೆಡೆ ಕಂಡುಬರುತ್ತಿದೆ. ಈಗಾಗಲೇ ಬೆಳೆಗಳು ಬಿತ್ತನೆಯಾಗಿದ್ದು, ಮೊಳಕೆಯೊಡೆದಿದ್ದ ಬೆಳೆಗಳು ನೀರಿನ ಅಭಾವದಿಂದಾಗಿ ಒಣಗಲಾರಂಭಿಸಿವೆ’ ಎಂಬುದು ಈ ಭಾಗದ ರೈತರ ಆತಂಕ.

‘ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮೀರಿ ನಡೆದಿದೆ. ಆದರೆ, ಈಗ ಮಳೆ ಇಲ್ಲದೆ ಬೆಳೆಗಳು  ಬಾಡಿವೆ. ರೈತರು ಕೈಯಲ್ಲಿದ್ದ ಹಣವನ್ನು ಗೊಬ್ಬರ, ಬಿತ್ತನೆ ಬೀಜಕ್ಕಾಗಿ ಸುರಿದು ಕಂಗಾಲಾಗಿದ್ದಾರೆ. ಶೇಂಗಾ, ತೊಗರಿ, ಹತ್ತಿ ಒಣಗಿವೆ. ಈ ವರ್ಷವೂ ಬರತಪ್ಪಿದ್ದಲ್ಲ ಎಂಬ ಚಿಂತೆ ಕಾಡುತ್ತಿದೆ’ ಎಂದು ರೈತ
ಹನುಮೇಶ ಹೇಳಿದರು.

ADVERTISEMENT

‘ಬೆಳೆಗಳು ಒಣಗಿರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಹೋಬಳಿವಾರು, ಗ್ರಾಮವಾರು ಸಮೀಕ್ಷೆ ನಡೆಸಬೇಕು. ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಸುರೇಶ ಒತ್ತಾಯಿಸಿದರು.

‘ಮಳೆ ಬಾರದೇ ಬೆಳೆಗಳು ಸಂಪೂರ್ಣ ಕಮರುತ್ತಿವೆ.  ಈ ಭಾಗದ ಮುಖ್ಯ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆಗೆ ಮುಂದಾಗದೇ ಮುಗಿಲಿನತ್ತ ಮುಖ ಮಾಡುವಂತಾಗಿದೆ’ ಎಂದು ರೈತ ಶಿವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.