ADVERTISEMENT

ಮುಖ್ಯರಸ್ತೆ ಸಂಚಾರ ತಡೆದು ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:03 IST
Last Updated 17 ನವೆಂಬರ್ 2017, 6:03 IST

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ 92ನೇ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಗುರುವಾರ ಪಟ್ಟಣದ ಹೊರವಲಯದ ಭಾಗ್ಯನಗರ ಕ್ಯಾಂಪ್ ಸಮೀಪ ರಾಯಚೂರು– ಲಿಂಗಸುಗೂರು ಮುಖ್ಯ ರಸ್ತೆ ತಡೆ ನಡೆಸಿದ ಪ್ರತಿಭಟನೆ ನಡೆಸಿದರು.

ತುಂಗಭದ್ರಾ ಎಡದಂಡೆ ನಾಲೆಗಳಿಗೆ ನೀರು ಹರಿಸಿ 70 ದಿನ ಕಳೆದರೂ ಉಪ ಕಾಲುವೆಗಳಿಗೆ ಸಮರ್ಪಕ ನೀರು ಹರಿಸದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ಭಾಗ್ಯನಗರ ಕ್ಯಾಂಪ್, ಜಕ್ಕಲದಿನ್ನಿ, ಗಣದಿನ್ನಿ ಮತ್ತು ಮಾಚನೂರು ಗ್ರಾಮದ ರೈತರು ರಸ್ತೆ ತಡೆ ನಡೆಸಿದರು.

ಮಲ್ಲಿಕಾರ್ಜುನ ಜಕ್ಕಲದಿನ್ನಿ ಮಾತನಾಡಿ,‘ಈ ತಾಲ್ಲೂಕಿನ ಶಾಸಕರು ತುಂಗಭದ್ರ ಆಖಾಡಾ ಸಮಿತಿ ಅಧ್ಯಕ್ಷರಾಗಿದ್ದರೂ ರೈತರು ನೀರಿಗಾಗಿ ಹೋರಾಟ ಮಾಡುವುದು ತಪ್ಪಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಹಶೀಲ್ದಾರ್ ಅಮರೇಶ ಬಿರಾದರ್ ಮತ್ತು ನೀರಾವರಿ ಇಲಾಖೆ ಯರಮರಸ್ ಅಧೀಕ್ಷಕ ಎಂಜಿನಿಯರ್ ರಾಮಪ್ರಸಾದ್ ಭೇಟಿ ನೀಡಿ, ಡಿಸೆಂಬರ್15ರವರೆಗೆ ಉಪ ಕಾಲುವೆಗಳಿಗೆ 3 ಅಡಿ ನೀರು ಹರಿಸುವ ಭರವಸೆ ನೀಡಿದ ನಂತರ ರಸ್ತೆ ತಡೆ ಹಿಂಪಡೆಯಲಾಯಿತು. ರಸ್ತೆ ತಡೆಯಿಂದ ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಮುಖಂಡರಾದ ರಾಜಪ್ಪಗೌಡ ಗಣದಿನ್ನಿ, ಮೌಲಾಸಾಬ್, ರೇವಣಸಿದ್ದಪ್ಪ ಲಕ್ಕಂದಿನ್ನಿ, ನಾಗಪ್ಪ ಪತ್ತಾರ, ಜೆ.ಬಸವರಾಜಗೌಡ, ರಾಮಯ್ಯ ಬೈನಾರ, ದಾನಪ್ಪ, ಅಮರೇಶ ಲಕ್ಕಂದಿನ್ನಿ, ಸತ್ಯನಾರಾಯಣ, ಶಿವನಾರಾಯಣ ರೆಡ್ಡಿ, ಕೋಟೇಶ್ವರ ರಾವ್, ವೆಂಕಟರೆಡ್ಡಿ ಗಣದಿನ್ನಿ, ಹನುಮಂತ, ಎಂ.ಆರ್.ಚೌದ್ರಿ ಇದ್ದರು.

ಸಂಸದ ವಿರುದ್ಧ ಆಕ್ರೋಶ: ರಾಯಚೂರು ಸಂಸದ ಬಿ.ವಿ.ನಾಯಕ ಅವರು ಧರಣಿ ಸ್ಥಳದ ಮೂಲಕ ಸಂಚಾರಿಸುವ ಸಂದರ್ಭ ಪೊಲೀಸ್ ಕಾವಲಿನೊಂದಿಗೆ ತೆರಳಿದ್ದು, ರೈತರ ಆಕ್ರೋಶಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.