ADVERTISEMENT

ಮುಚ್ಚಿದೆ ಆಯುಷ್ ಆಸ್ಪತ್ರೆ

ವೈದ್ಯರ ಮುಖ ನೋಡದ ರೋಗಿಗಳು: ಚಿಕಿತ್ಸೆಗೆ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:10 IST
Last Updated 29 ಆಗಸ್ಟ್ 2015, 7:10 IST

ಮಸ್ಕಿ: ಆಯುಷ್‌ ಆಸ್ಪತ್ರೆಗಳ ಮೂಲಕ ಆಯುರ್ವೇದ ಪದ್ಧತಿ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡಿದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲೆಡೆ ಆಯುಷ್ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. ಆದರೆ, ಕಟ್ಟಿದ ಆಸ್ಪತ್ರೆಗಳು ಪ್ರಯೋಜನಕ್ಕೆ ಬಾರದೆ ನಿಂತಿವೆ.

ಇಲ್ಲಿನ ಹಳೆಯ ಸರ್ಕಾರಿ ಆಸ್ಪತ್ರೆ ಬಳಿ ₨50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆಯುಷ್‌ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಯಾಗಿ ಮೂರು ತಿಂಗಳು ಕಳೆದಿದ್ದರೂ ಇನ್ನೂ ವೈದ್ಯರು ಅಥವಾ ಸಿಬ್ಬಂದಿ ನೇಮಕವಾಗಿಲ್ಲ.

ಕಟ್ಟಡ ನಿರ್ಮಾಣದ ಗುಣಮಟ್ಟದ ಬಗ್ಗೆ ಅನೇಕ ದೂರುಗಳು ಬಂದಿದ್ದರೂ ಭೂ ಸೇನಾ ನಿಗಮದ ಅಧಿಕಾರಿಗಳು ತರಾತುರಿಯಲ್ಲಿ ಕಟ್ಟಡ ನಿರ್ಮಿಸಿ ಕೈತೊಳೆದುಕೊಂಡರು. ಹೊಸ ಕಟ್ಟಡಕ್ಕೆ ಹಳೆಯ ಕಿಟಕಿ, ಬಾಗಿಲು ಜೋಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದ್ದಾರೆ.

ಆಸ್ಪತ್ರೆ ಕಟ್ಟಡ ಉದ್ಘಾಟನೆಯಾಗಿ ಮೂರು ತಿಂಗಳು ಕಳೆದರೂ ಆಸ್ಪತ್ರೆ ಕಾರ್ಯಾರಂಭ ಮಾಡಿಲ್ಲ. ಚಿಕಿತ್ಸೆಗೆ ಬರುವ ರೋಗಿಗಳು ಪ್ರತಿದಿನ ಮುಚ್ಚಿದ ಬಾಗಿಲು ನೋಡಿಕೊಂಡು ಹೋಗುವಂತಾಗಿದೆ ಎಂದು ನಿವಾಸಿ ನಾಗರಾಜ ತಿಳಿಸುತ್ತಾರೆ.

ಆಯುಷ್‌ ಆಸ್ಪತ್ರೆ ಕಟ್ಟಡ ಜೂಜುಕೋರರ ತಾಣವಾಗಿದೆ. ಪ್ರತಿನಿತ್ಯ ಆಸ್ಪತ್ರೆ ಕಟ್ಟಡದ ಕಟ್ಟೆ, ಮೆಟ್ಟಲುಗಳು ಮುಂದೆ ಜೂಜು ಆಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆಯುಷ್ ಇಲಾಖೆ ಅಧಿಕಾರಿ ಈ ಕಡೆ ಒಂದು ಸಲವೂ ಮುಖ ಮಾಡಿ ನೋಡಿಲ್ಲ ಎಂದು ಕರ್ನಾಟಕ ರಕ್ಷಣ ವೇದಿಕೆ ಮಸ್ಕಿ ಘಟಕದ ಅಧ್ಯಕ್ಷ ಅಶೋಕ ಮುರಾರಿ ಆರೋಪಿಸಿದ್ದಾರೆ.

ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ನಿರ್ಮಿಸುತ್ತಿದೆ. ಆದರೆ, ಮೂಲಸೌಕರ್ಯಗಳ ಕೊರತೆಯಿಂದ ಕಟ್ಟಡಗಳು ಹಾಳು ಬೀಳುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.