ADVERTISEMENT

‘ಮುಸುರೆ’ ಚೆಲ್ಲುವ ಹಾವಳಿಗೆ ರಿಮ್ಸ್‌ ತಲ್ಲಣ

ನಾಗರಾಜ ಚಿನಗುಂಡಿ
Published 20 ನವೆಂಬರ್ 2017, 9:56 IST
Last Updated 20 ನವೆಂಬರ್ 2017, 9:56 IST
ರಾಯಚೂರಿನ ರಿಮ್ಸ್‌ ಆಸ್ಪತ್ರೆಯ ಆವರಣದೊಳಗೆ ಚೆಲ್ಲುವ ಮುಸುರೆಯಿಂದ ಕೊಳಚೆ ನಿರ್ಮಾಣವಾಗಿರುವುದು
ರಾಯಚೂರಿನ ರಿಮ್ಸ್‌ ಆಸ್ಪತ್ರೆಯ ಆವರಣದೊಳಗೆ ಚೆಲ್ಲುವ ಮುಸುರೆಯಿಂದ ಕೊಳಚೆ ನಿರ್ಮಾಣವಾಗಿರುವುದು   

ರಾಯಚೂರು: ರಾಯಚೂರು ವೈದ್ಯ ವಿಜ್ಞಾನ ಸಂಸ್ಥೆ(ರಿಮ್ಸ್‌) ಆಸ್ಪತ್ರೆಯ ನೆಲಮಹಡಿಯಲ್ಲಿ ಜನರು ಹಾಗೂ ವೈದ್ಯರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಇದೆ. ಆಸ್ಪತ್ರೆಯ ಮೇಲಿನ ಮಹಡಿಗಳಿಂದ ಜನರು ಚೆಲ್ಲುವ ಮುಸುರೆ ನೀರು ಇಡೀ ವಾತಾವರಣದಲ್ಲಿ ದುರ್ನಾತ ಹರಡಿದೆ.

ಆಸ್ಪತ್ರೆಯ ಕ್ಯಾಂಟಿನ್‌ ಪಕ್ಕದ ಮುಖ್ಯದ್ವಾರದಿಂದ ಒಳಗೆ ಹೋಗುವವರು ಕೂಡಲೇ ಮುಖ ಕಿವುಚಿ ಮೂಗು ಮುಚ್ಚಿಕೊಳ್ಳುತ್ತಾರೆ. ಮುಸುರೆ ನೀರು ಮೇಲಿಂದ ಮೇಲೆ ಬೀಳುತ್ತಲೇ ಇರುತ್ತದೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಂದಿಗೆ ಉಳಿದ ಜನರು ಹಾಗೂ ರೋಗಿಗೆ ಊಟ ಮಾಡಿಸಿದ ಬಳಿಕ ನಿರಾತಂಕವಾಗಿ ಮುಸುರೆಯನ್ನು ಆಸ್ಪತ್ರೆಯೊಳಗಿನ ಅಂಗಳಕ್ಕೆ ಎಸೆಯುತ್ತಾರೆ.

ಮುಸುರೆ ಹಾಗೂ ತ್ಯಾಜ್ಯ ಹಾಕುವುದಕ್ಕೆ ಸೂಕ್ತ ವ್ಯವಸ್ಥೆ ಇದ್ದರೂ ಜನರು ಅವುಗಳನ್ನು ಬಳಸುತ್ತಿಲ್ಲ ಎನ್ನುವುದು ಆಸ್ಪತ್ರೆ ಸಿಬ್ಬಂದಿಯ ವಾದ. ಮುಸುರೆ ಚೆಲ್ಲುವುದನ್ನು ತಪ್ಪಿಸಲು ಕಾವಲುಗಾರರು ಹಾಗೂ ಶುಶ್ರೂಷಕಿಯರು ನಿಗಾ ಇಟ್ಟಿರುತ್ತಾರೆ. ಆದರೂ ಅವರ ಕಣ್ತಪ್ಪಿಸಿ ಜನರು ಮಸುರೆ ಹಾಕುತ್ತಾರೆ.

ADVERTISEMENT

‘ರೋಗಿಯ ಜೊತೆಗೆ ಯಾರೂ ಒಳಗೆ ಬರಬಾರದು ಎನ್ನುವ ನಿಯಮವಿದೆ. ಆದರೂ ಜನರು ಕೇಳಿಸಿಕೊಳ್ಳುವುದಿಲ್ಲ. ಆಸ್ಪತ್ರೆಯೊಳಗಿನ ಖಾಲಿ ಜಾಗದಲ್ಲಿ ವಿಹಾರಕ್ಕೆ ಬಂದವರಂತೆ ಕುಳಿತುಕೊಳ್ಳುತ್ತಾರೆ. ರೋಗಿಗಳಿಗೆ ಆಸ್ಪತ್ರೆಯಿಂದಲೇ ಊಟ ಒದಗಿಸುವ ವ್ಯವಸ್ಥೆ ಇದೆ. ಖಾರ, ಉಪ್ಪು ಹಾಗೂ ಸಿಹಿಯನ್ನು ಹಿತಮಿತವಾಗಿ ರೋಗಿಗೆ ಕೊಡಬೇಕಾಗುತ್ತದೆ.

ಅನಾರೋಗ್ಯವಿದ್ದರೂ ಗ್ರಾಮೀಣ ಭಾಗದಿಂದ ಬಂದವರು ಕದ್ದುಮುಚ್ಚಿ ಖಾರದ ಊಟ ಮಾಡುತ್ತಾರೆ. ಬೇಡ ಎಂದು ಹೇಳಿದರೂ ಕೇಳುವುದಿಲ್ಲ. ಊಟ ಮಾಡಿದ ಮುಸುರೆಯನ್ನು ಇಲ್ಲಿಯೆ ಬಿಸಾಕುತ್ತಾರೆ. ರೋಗಿಯ ಸಂಬಂಧಿಗಳು ಊಟ ಮಾಡಲು ಆಸ್ಪತ್ರೆಯ ಹೊರಗೆ ವ್ಯವಸ್ಥೆ ಇದೆ. ಹೊರಗೆ ಯಾರೂ ಹೋಗುತ್ತಿಲ್ಲ’ ಎನ್ನುತ್ತಾರೆ ಆಸ್ಪತ್ರೆಯ ಅಧೀಕ್ಷಕ ಡಾ.ರಮೇಶ್‌ ಬಿ.ಎಚ್‌ ಅವರು.

ಸಿಬ್ಬಂದಿ ಜತೆ ವಾಗ್ವಾದ: ಆಸ್ಪತ್ರೆಯ ಮಹಡಿಗಳ ಆವರಣದಲ್ಲಿ ರೋಗಿಗಳ ಸಂಬಂಧಿಗಳು ಗುಂಪು ಗುಂಪಾಗಿ ಕುಳಿತುಕೊಳ್ಳುವುದನ್ನು ಹಾಗೂ ಆಸ್ಪತ್ರೆಯ ಕೋಣೆಯೊಳಗೆ ಊಟ ಮಾಡುವುದನ್ನು ತಪ್ಪಿಸಲು ಕಾವಲು ಗಾರರು ಪ್ರತಿದಿನವೂ ಹರಸಾಹಸ ಪಡುತ್ತಿದ್ದಾರೆ. ಆದರೆ ಕಾವಲುಗಾರರ ಮಾತಿಗೆ ಜನರು ಸ್ಪಂದಿಸುತ್ತಿಲ್ಲ. ಸೂಚನೆ ಕೊಡುವ ಸಿಬ್ಬಂದಿಯನ್ನೆ ಜನರು ಕಣ್ಣಿಂದ ಗುರಾಯಿಸುತ್ತಾರೆ. ಅಲ್ಲದೆ, ಪ್ರತಿಷ್ಠೆ ಮಾಡಿಕೊಂಡು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ವಾಗ್ವಾದ ಮಾಡುವ ಪ್ರಸಂಗಗಳು ಸರ್ವೆಸಾಮಾನ್ಯವಾಗಿವೆ.

‘ಆಸ್ಪತ್ರೆಯಲ್ಲಿ ಯಾವುದು ಎಲ್ಲಿದೆ ಎಂದು ಕೆಲವರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಗ್ರಾಮಗಳಿಂದ ಬರುವ ಜನರು ಮುಸುರೆ ಚೆಲ್ಲುತ್ತಾರೆ. ಅವರಿಗೆ ತಿಳಿವಳಿಕೆ ನೀಡಿ, ಮುಸುರೆ ಹಾಕುವ ಜಾಗ ತೋರಿಸಿದರೆ ಜನರು ಬದಲಾಗುತ್ತಾರೆ’ ಎಂದು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಯರಮರಸ್‌ ನಿವಾಸಿ ರಮೇಶ ಅವರು ಹೇಳುವ ಮಾತಿದು.

ಧರ್ಮ ಛತ್ರ ನಿರ್ಮಾಣ
ಮುಸುರೆ ಚೆಲ್ಲುವುದು ಹಾಗೂ ರೋಗಿಯ ಜತೆಗೆ ಕೋಣೆಯಲ್ಲಿ ಉಳಿಯುವ ಜನಜಂಗುಳಿ ಸಮಸ್ಯೆಯನ್ನು ಕೊನೆಗಾಣಿಸಲು ಹೊಸ ಯೋಜನೆ ಸಿದ್ಧವಾಗಿದೆ. ಜನರು ಕುಳಿತುಕೊಳ್ಳಲು ಹಾಗೂ ಊಟ ಮಾಡುವುದಕ್ಕೆ ಅನುವಾಗಲು ಧರ್ಮ ಛತ್ರದ ರೀತಿಯಲ್ಲಿ ಟೆಂಟ್‌ವೊಂದನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ ಎಂದು ರಿಮ್ಸ್‌ ಡೀನ್‌ ಡಾ.ಕವಿತಾ ಪಾಟೀಲ ತಿಳಿಸಿದರು.

ಈ ಹಾವಳಿ ತಪ್ಪಿಸುವುದಕ್ಕಾಗಿಯೆ ಕಾವಲುಗಾರರ ಸಂಖ್ಯೆ ಹೆಚ್ಚಿಸಬೇಕಿದೆ. ಎಲ್ಲಿಬೇಕೆಂದರಲ್ಲಿ ಮುಸುರೆ ಚೆಲ್ಲುವ ಪ್ರವೃತ್ತಿಗೆ ಬ್ರೇಕ್‌ ಹಾಕಲಾಗುವುದು. ಇದಕ್ಕಾಗಿ ಒಂದಿಷ್ಟು ವೆಚ್ಚವಾಗುತ್ತದೆ ಎಂದರು.

* * 

ರೋಗಿಗಳನ್ನು ನೋಡಲು ಬರುವವರು ಚಿಕಿತ್ಸೆ ನೀಡುವ ಕೋಣೆ, ಅಥವಾ ಕೋಣೆ ಪಕ್ಕದಲ್ಲಿ ನಿರಂತರ ಉಳಿಯು ವುದರಿಂದ ಅವರಿಗೂ ರೋಗದ ಸೋಂಕು ತಗುಲುವ ಸಾಧ್ಯತೆ ಇದೆ.
ಡಾ.ಕವಿತಾ ಪಾಟೀಲ.
ಡೀನ್‌, ರಿಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.