ADVERTISEMENT

ರಾಜಕಾಲುವೆ ಸ್ವಚ್ಛತೆಗೆ ಅಣಿಯಾದ ನಗರಸಭೆ

ನಾಗರಾಜ ಚಿನಗುಂಡಿ
Published 22 ಮೇ 2017, 6:13 IST
Last Updated 22 ಮೇ 2017, 6:13 IST
ಮಡ್ಡಿಪೇಟೆ ಬಡಾವಣೆಯಲ್ಲಿನ ರಾಜಕಾಲುವೆ ತ್ಯಾಜ್ಯದಿಂದ ತುಂಬಿರುವುದು
ಮಡ್ಡಿಪೇಟೆ ಬಡಾವಣೆಯಲ್ಲಿನ ರಾಜಕಾಲುವೆ ತ್ಯಾಜ್ಯದಿಂದ ತುಂಬಿರುವುದು   

ರಾಯಚೂರು: ಮುಂಗಾರು ಆರಂಭವಾಗುವ ಪೂರ್ವ ನಗರದ ರಾಜಕಾಲುವೆಯಲ್ಲಿನ ಹೂಳು ಮತ್ತು ಕಸ ವಿಲೇವಾರಿ ಮಾಡುವುದಕ್ಕೆ ನಗರಸಭೆ ತಯಾರಿ ಮಾಡಿಕೊಂಡಿದೆ.
ಹರಿಜನವಾಡಾದಿಂದ ಎಲ್‌ಬಿಎಸ್ ನಗರವರೆಗಿನ 2.5 ಕಿಲೋ ಮೀಟರ್ ರಾಜಕಾಲುವೆ ಸ್ವಚ್ಛಗೊಳಿಸುವ ಉದ್ದೇಶ ಅಧಿಕಾರಿಗಳದ್ದು. ಪ್ರತಿ ವರ್ಷ ರಾಜಕಾಲುವೆಯಿಂದ ಮಳೆ ನೀರು ರಸ್ತೆಗಳಿಗೆ ನುಗ್ಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜಕಾಲುವೆಗಳನ್ನು ಸುಸ್ಥಿತಿಗೊಳಿಸುವ ಕೆಲಸ ಮಾಡಲಾಗುತ್ತಿದೆ.

ಕೆಲವು ಭಾಗದಲ್ಲಿ ರಾಜಕಾಲುವೆಯು ದುರ್ನಾತ ಎಬ್ಬಿಸಿದೆ. ಇದರಿಂದ ಸುತ್ತಲಿನ ಜನವಸತಿ ಪ್ರದೇಶದ ಜನರು ತಾಪತ್ರಯ ಅನುಭವಿಸುತ್ತಿದ್ದಾರೆ. ಕೂಡಲೇ ತ್ಯಾಜ್ಯ ವಿಲೇವಾರಿ ಮಾಡಿದರೆ, ಮಲೀನ ನೀರು ಹರಿದು ಹೋಗಲು ಸಾಧ್ಯವಾಗುತ್ತದೆ. ರಾಜಕಾಲುವೆಯನ್ನೆ ತಿಪ್ಪೆ ಎಂದು ಪರಿಗಣಿಸಿ ಕೆಲವು ಕಡೆಗಳಲ್ಲಿ ತ್ಯಾಜ್ಯವನ್ನು ಅದರಲ್ಲಿ ಸುರಿಯಲಾಗಿದೆ.

ರಾಜಕಾಲುವೆಗೆ ನಿರ್ದಿಷ್ಟ ಗಡಿಯನ್ನು ಗುರುತಿಸಿದ್ದರೂ ಅದಕ್ಕೆ ಹೊಂದಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಗಮನಾರ್ಹವೆಂದರೆ, ಇಂತಹ ಕಟ್ಟಡಗಳಿಗೆ ನಗರಸಭೆಯಿಂದಲೇ ಅನುಮತಿ ನೀಡಲಾಗಿರುತ್ತದೆ.

ADVERTISEMENT

ನಗರದಾದ್ಯಂತ ಒಳಚರಂಡಿ ಕಾಮಗಾರಿ, ನಿರಂತರ ನೀರು ಸರಬರಾಜು ಯೋಜನೆ ಹಾಗೂ ಮಳೆನೀರು ಚರಂಡಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಪೈಪ್‌ಲೈನ್ ಅಳವಡಿಸಲು ಕೆಲವು ಭಾಗದಲ್ಲಿ ರಾಜಕಾಲುವೆ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ನೀರು ಸ್ಥಗಿತಗೊಂಡಿರುವ ಕಡೆಗಳಲ್ಲಿ ಸ್ವಚ್ಛತೆ ನಡೆಸುವುದು ಕಷ್ಟವಾಗುತ್ತದೆ. ಆದರೂ ಯಂತ್ರಗಳನ್ನು ಬಳಸಿ ಕೆಲಸ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಮಳೆ ಸಾಧ್ಯತೆ: ರಾಜಕಾಲುವೆಯಿಂದ ಹೂಳು ಎತ್ತುವ ಕೆಲಸವನ್ನು ಗುತ್ತಿಗೆದಾರರು ಸಮರೋಪಾದಿಯಲ್ಲಿ ಮಾಡಬೇಕಿದೆ. ಈಗಾಗಲೇ ಮೇ ಅಂತ್ಯದಲ್ಲಿದ್ದು ಮುಂಗಾರು ಆರಂಭವಾದರೆ ರಾಜಕಾಲುವೆ ಕೆಲಸ ಮುಂದಿನ ವರ್ಷಕ್ಕೆ ಯೋಜನೆ ವರ್ಗಾವಣೆಯಾಗುತ್ತದೆ.

ಶೀಘ್ರದಲ್ಲೇ ಆರಂಭ
ರಾಜಕಾಲುವೆ ಸ್ವಚ್ಚತೆಗಾಗಿ ಬಹಳ ಹಿಂದೆಯೇ ನಗರಸಭೆಯಿಂದ ಯೋಜನೆ ಮಾಡಲಾಗಿತ್ತು. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದರೂ ಸ್ವಲ್ಪ ವಿಳಂಬ ಮಾಡಲು ತಿಳಿಸಲಾಗಿತ್ತು. ಮಳೆಗಾಲ ದೂರವಿದ್ದಾಗ ಸ್ವಚ್ಛತೆ ಮಾಡಿದರೆ, ಮತ್ತೆ ಹೂಳು ಮತ್ತು ತ್ಯಾಜ್ಯ ತುಂಬಿಕೊಳ್ಳುತ್ತದೆ ಎನ್ನುವ ಕಾರಣದಿಂದ ಕೆಲಸ ಆರಂಭಿಸಿರಲಿಲ್ಲ.

ಮೇ ಮುಗಿಯುವುದರೊಳಗೆ ಕೆಲಸ ಆರಂಭಿಸಲಾಗುವುದು. ನಗರದಲ್ಲಿ ಮಳೆನೀರು ಸಮರ್ಪಕವಾಗಿ ರಾಜಕಾಲುವೆ ಮೂಲಕ ಹರಿದು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವ ತಯಾರಿ ಅಗತ್ಯ
ಮಳೆ ನೀರು ಸಮರ್ಪಕವಾಗಿ ಹರಿದುಹೋಗದೆ ಸಮಸ್ಯೆಗಳು ಸೃಷ್ಟಿಯಾದರೆ ನಗರಸಭೆಯಿಂದಲೇ ಅದನ್ನು ಪರಿಹರಿಸ ಬೇಕಾಗುತ್ತದೆ. ಮಳೆನೀರು ಹರಿದುಹೋಗುವುದಕ್ಕೆ ಪೂರ್ವ ತಯಾರಿ ಮಾಡಿಕೊಂಡರೆ, ಮಳೆಗಾಲದಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಂದ ಪಾರಾಗಬಹುದು. ಎಲ್ಲವೂ ನಗರಸಭೆ ಅಧಿಕಾರಿಗಳ ನಿರ್ಧಾರವನ್ನು ಅವಲಂಬಿಸಿದೆ.

ರಾಜಕಾಲುವೆ ನಿರ್ವಹಣೆ
* ₹27 ಲಕ್ಷಸ್ವಚ್ಛತೆಗಾಗಿ ಮಾಡುತ್ತಿರುವ ವೆಚ್ಚ

* ಪ್ಲಾಸ್ಟಿಕ್ ಭರ್ತಿ ರಾಜಕಾಲುವೆಗಳಲ್ಲಿ  ಪ್ಲಾಸ್ಟಿಕ್ ಕಸ ಬಿದ್ದಿದ್ದು, ಇದರಿಂದ  ಗಲೀಜು ಹೆಚ್ಚಿದೆ.

* 2.5ಕಿ.ಮೀ ರಾಜಕಾಲುವೆಯ ಒಟ್ಟು ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.