ADVERTISEMENT

ರಾಯಚೂರು ಕೋಟೆ ಅಭಿವೃದ್ಧಿಗೆ ₹4.5 ಕೋಟಿ: ಬೋಸರಾಜು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 5:59 IST
Last Updated 22 ನವೆಂಬರ್ 2017, 5:59 IST
ಬೋಸರಾಜು
ಬೋಸರಾಜು   

ರಾಯಚೂರು: ರಾಯಚೂರು ಕೋಟೆ ಅಭಿವೃದ್ಧಿಗಾಗಿ ಅಂದಾಜು ವೆಚ್ಚ ₹4.5 ಕೋಟಿಗೆ ಮಂಜೂರಾತಿ ನೀಡಲಾಗಿತ್ತು. ಈಗ ಮತ್ತೆ ಹೊಸ ಅಂದಾಜು ಪಟ್ಟಿ ಸಲ್ಲಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ತಿಳಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರು ರಾಯಚೂರಿನ ಪ್ರಾಚೀನ ಕೋಟೆ ಅಭಿವೃದ್ಧಿಗೆ ಮಂಜೂರಾತಿ ನೀಡಿದ ವಿಷಯ ಕುರಿತು ಕೇಳಿರುವ ಪ್ರಶ್ನೆಗೆ ಸಚಿವರು ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಲಿಖಿತ ಉತ್ತರ ನೀಡಿದ್ದಾರೆ.

‘ಲೋಕೋಪಯೋಗಿ ಇಲಾಖೆ ಯಿಂದ ಕೋಟೆ ಅಭಿವೃದ್ಧಿ ಮಾಡಿಸುವುದಕ್ಕೆ ಈ ಮೊದಲು ಅನುದಾನ ಮಂಜೂರಾತಿ ಕೊಡಲಾಗಿತ್ತು. ಆದರೆ ಕೋಟೆಯು ಸಂರಕ್ಷಿತ ಸ್ಮಾರಕ ಆಗಿರುವುದರಿಂದ ಪುರಾತತ್ವ ಇಲಾಖೆ ಮೂಲಕವೆ ಅದರ ಅಭಿವೃದ್ಧಿ ಕೈಗೊಳ್ಳಬೇಕಾಗಿದ್ದು, ಮುಂದಿನ ಕ್ರಮ ವಹಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಗರ್ಭಿಣಿಯರಿಗೆ ಅನುಕೂಲ: ಮಾತೃಪೂರ್ಣ ಯೋಜನೆಯಡಿ ರಾಯಚೂರು ಜಿಲ್ಲೆಯಲ್ಲಿ 16,887 ಗರ್ಭಿಣಿಯರಿಗೆ ಅನುಕೂಲವಾಗಿದೆ. ಅದರಲ್ಲೂ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದ್ದ ಮಾನ್ವಿ ತಾಲ್ಲೂಕಿನಲ್ಲಿ 3,988 ಗರ್ಭಿಣಿಯರಿಗೆ ಅನುಕೂಲ ಒದಗಿಸಲಾಗಿದೆ ಎಂದು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಅವರು ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ಒದಗಿಸಿದ್ದಾರೆ.

ಪಡಿತರ ಚೀಟಿದಾರರು ಎಷ್ಟಿದ್ದಾರೆ: ರಾಯಚೂರು ಜಿಲ್ಲೆಯಾದ್ಯಂತ ಪಡಿತರ ಚೀಟಿದಾರರು ಎಷ್ಟಿದ್ದಾರೆ ಹಾಗೂ ಇದಕ್ಕಾಗಿ ಸರ್ಕಾರವು ಜಿಲ್ಲೆಗೆ ಎಷ್ಟು ಹಣ ವೆಚ್ಚ ಮಾಡುತ್ತಿದೆ ಎಂದು ಎನ್‌.ಎಸ್‌.ಬೋಸರಾಜು ಅವರು ಕೇಳಿದ್ದ ಪ್ರಶ್ನೆಗಳಿಗೆ ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಸಚಿವ ಯು.ಟಿ.ಖಾದರ್‌ ಅವರು ಲಿಖಿತ ಉತ್ತರ ನೀಡಿದ್ದಾರೆ.

‘ಜಿಲ್ಲೆಯಲ್ಲಿ 3,09,459 ಬಿಪಿಎಲ್‌, 27,031 ಎಪಿಎಲ್‌ ಹಾಗೂ 45,481 ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿದ್ದಾರೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿ ತಿಂಗಳು ಅಂತ್ಯೋದಯ ಚೀಟಿದಾರರಿಗೆ 35 ಕೆಜಿ ಹಾಗೂ ಬಿಪಿಎಲ್‌ ಚೀಟಿದಾರರಿಗೆ 5 ಕೆಜಿ ಅಕ್ಕಿಯನ್ನು ₹3 ದರದಲ್ಲಿ ನೀಡುತ್ತಿದೆ. ರಾಯಚೂರಿಗೆ ಪ್ರತಿ ತಿಂಗಳು 2,17,403 ಮೆಟ್ರಿನ್‌ ಟನ್‌ ಅಕ್ಕಿ ಬರುತ್ತಿದೆ. ಬಿಪಿಎಲ್‌ ಚೀಟಿದಾರರಿಗೆ ಪ್ರತಿ ಘಟಕಕ್ಕೆ 2 ಕೆಜಿ ಅಕ್ಕಿ ಹೆಚ್ಚುವರಿಯಾಗಿ ವಿತರಿಸಲು ಪ್ರತಿ ಕೆಜಿಗೆ ₹25 ವೆಚ್ಚದಲ್ಲಿ ಭಾರತ ಆಹಾರ ನಿಗಮದಿಂದ ಖರೀದಿಸಲಾಗುತ್ತಿದೆ. ವಾಗಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕು ಆಸ್ಪತ್ರೆಗಳಲ್ಲಿ ಐಸಿಯು ಶೀಘ್ರ: ದೇವದುರ್ಗ, ಸಿಂಧನೂರು, ಮಾನ್ವಿ ಹಾಗೂ ಲಿಂಗಸುಗೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೆ ತೀವ್ರ ನಿಗಾ ಘಟಕಗಳು ಕಾರ್ಯಾರಂಭ ಮಾಡಲಿವೆ. ಸಿವಿಲ್‌ ಕಾಮಗಾರಿ ಮುಗಿದಿದ್ದು, ಯಂತ್ರೋಪಕರಣಗಳು ಬಂದಿವೆ. ದೇವದುರ್ಗವೊಂದನ್ನು ಬಿಟ್ಟು ವೈದ್ಯರಿಗೆ ಹಾಗೂ ಶುಶ್ರೂಷಕಿಯರಿಗೆ ಐಸಿಯು ಸೇವೆಯ ತರಬೇತಿ ಒದಗಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.