ADVERTISEMENT

ರಾಯಚೂರು: ವೇತನ ಸಮಸ್ಯೆ ಬಗೆಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:34 IST
Last Updated 14 ಮೇ 2017, 8:34 IST

ರಾಯಚೂರು: ಪ್ರೌಢಶಾಲಾ ಶಿಕ್ಷಕರ ವೇತನ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳು ಬಗೆಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲ್ಲೂಕು ಘಟಕ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಶಿಕ್ಷಕರಿಗೆ ವೇತನ ಕೊಡಿಸುವುದು ಕ್ಷೇತ್ರ ಶಿಕ್ಷಣಾಧಿಕಾರಿ ಜವಾಬ್ದಾರಿ. ಆದರೆ, ಸಂಘ ಮುಂದಾಳತ್ವ ವಹಿಸಿಕೊಂಡು ಮೂರು ವರ್ಷಗಳಿಂದ ಶ್ರಮಿಸುತ್ತಿದೆ. ಇದರಿಂದ ಶಿಕ್ಷಕರಿಗೆ ತಪ್ಪು ಕಲ್ಪನೆ ಮೂಡಿದ್ದು, ಸಂಘಕ್ಕೆ ಕಪ್ಪು ಚುಕ್ಕೆ ಬಂದಿದೆ. ಇನ್ನುಮುಂದೆ ಸಂಘ ಈ ಕಾರ್ಯ ಮಾಡಲ್ಲ. ಸಮಸ್ಯೆಗಳು ಬಗೆಹರಿಸಿ ಮುಂದಿನ ತಿಂಗಳಿಂದ 5ನೇ ತಾರೀಖಿನೊಳಗೆ ವೇತನ ನೀಡಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಾರ್ಚ್‌ ಮತ್ತು ಏಪ್ರಿಲ್‌ ವೇತನ ಮೇ 2ಕ್ಕೆ ಜಮಾ ಆಗುತ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇ 11ಕ್ಕೆ ವೇತನ ಆಗುತ್ತಿದೆ.ಇದರಿಂದ ಶಿಕ್ಷಕರಿಗೆ ಸಮಸ್ಯೆಯಾಗಿದ್ದು, ಮಕ್ಕಳೊಂದಿಗೆ ಪ್ರವಾಸ ಮಾಡುವ ಕನಸು ಭಗ್ನಗೊಂಡಿದೆ. ಶಿಕ್ಷಕರ ವೇತನ ಕಾರ್ಯ ನಿರ್ವಹಿಸಲು ಪ್ರತ್ಯೇಕ ಸಿಬ್ಬಂದಿ ಒದಗಿಸಬೇಕು ಎಂದರು.

ADVERTISEMENT

2017–18ನೇ ಸಾಲಿನ ಪ್ರಥಮ ಕಂತು ಅನುದಾನ ಮೇ ವೇತನಕ್ಕೆ ಮುಕ್ತಾಯವಾಗುತ್ತದೆ. ಜೂನ್‌, ಜುಲೈ ಹಾಗೂ ಆಗಸ್ಟ್ ತಿಂಗಳ ವೇತನಕ್ಕೆ ಸಮಸ್ಯೆ ಆಗಲಿದ್ದು, ಮೇ ತಿಂಗಳಲ್ಲಿ ಮುಂದಿನ ಕಂತಿನ ಅನುದಾನ ತರಿಸಿಕೊಂಡು ವೇತನ ಸಮಸ್ಯೆ ಬಗೆಹರಿಸಬೇಕು. ಗಳಿಕೆ ರಜೆ, ಹೆಚ್ಚುವರಿ ವೇತನ ಬಡ್ತಿ, ತುಟ್ಟಿಭತ್ಯೆ, ಹಬ್ಬದ ಮುಂಗಡ ಹಣ ಹಾಗೂ ವಾರ್ಷಿಕ ಬಡ್ತಿಗೆ ಅನುದಾನ ಕೊರತೆಯಿದ್ದು, ಹೆಚ್ಚುವರಿ ಅನುದಾನ ಪಡೆಯಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷ ಮೋಹಿನುಲ್‌ ಹಕ್‌, ಕಾರ್ಯದರ್ಶಿ ಆಂಜನೇಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.